ಕಲಬುರಗಿ | ಬಿ.ಸಿ.ಎಂ. ಮಹಿಳಾ ವಸತಿ ನಿಲಯಕ್ಕೆ ಉಪ ಲೋಕಾಯುಕ್ತರ ಭೇಟಿ
ಕಲಬುರಗಿ : ಕಲಬುರಗಿ ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದ ನಂತರ ರಾತ್ರಿ 9 ಗಂಟೆ ಸುಮಾರಿಗೆ ನಗರದ ಐವಾನ್-ಎ-ಶಾಹಿ ಪ್ರದೇಶದ ಬಿ.ಸಿ.ಎಂ. ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು.
ವಸತಿ ನಿಲಯದಲ್ಲಿ ಫ್ಯಾನ್, ಲೈಟ್ ಇಲ್ಲ, ಕಟ್ಟಡ ಹಳೆದಾಗಿರುವುದರಿಂದ ದುರಸ್ತಿ ಮಾಡಿಸಬೇಕಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ವಾರ್ಡನ್ ಮೇಡಂ ಸರಿಯಾಗಿ ನೋಡಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿಯರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಕೂಡಲೇ ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿ. ದುರಸ್ತಿಗಳಿದ್ದರೆ ಸರಿಪಡಿಸಿ. ಜೆಸ್ಕಾಂನಿಂದ ವಿದ್ಯುತ್ ರಿಪೇರಿ ಮಾಡಿಸಬೇಕು ಎಂದು ವಾರ್ಡನ್ ಮಂದಾಕಿನಿ ಅವರಿಗೆ ಬಿ.ವೀರಪ್ಪ ಸೂಚಿಸಿದರು.
ವಸತಿ ನಿಲಯದಲ್ಲಿ ಗ್ರಂಥಾಲಯದಲ್ಲಿ ಇಲ್ಲದಿರುವುದು ವ್ಯಾಸಂಗಕ್ಕೆ ತೊಂದರೆಯಾಗುತ್ತಿದ್ದು, ಗ್ರಂಥಾಲಯ ಆರಂಭಿಸಬೇಕು ಎಂಬ ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿದ ನ್ಯಾ.ಬಿ.ವೀರಪ್ಪ ಎರಡು ತಿಂಗಳಲ್ಲಿ ಗ್ರಂಥಾಲಯ ಆರಂಭಿಸುವಂತೆ ಬಿ.ಸಿ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ಸರಿಯಾಗಿ ನೋಡಿಕೊಳ್ಳಿ ಎಂದು ವಾರ್ಡನ್ ಗೆ ಸಲಹೆ ನೀಡಿದರು.
ನಂತರ ಚಂಪಾ ಕ್ರೀಡಾಂಗಣದ ಎದುರುಗಡೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರಕಾರಿ ಪಾಲಿಟೆಕ್ನಿಕ್ ವಸತಿ ಗೃಹಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು, ನಿಲಯದ ಹೊರಗಡೆ ಲೈಟ್ ಹಾಕದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಲೈಟ್ ಹಾಕಿಸಿ, ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ವಾರ್ಡನ್ ತುಕಾರಾಮ ಚವ್ಹಾಣ ಅವರಿಗೆ ಸೂಚಿಸಿದರು.
ವಿದ್ಯಾರ್ಥಿಗಳಿರುವ ಕೊಠಡಿಗೆ ಪ್ರವೇಶಿಸಿದ ಅವರು ವ್ಯಾಸಂಗ ಮಾಡುತ್ತಿರುವ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಚೆನ್ನಾಗಿ ಓದಿ, ಭ್ರಷ್ಟಾಚಾರಕ್ಕೆ ಸಹಕರಿಸಬೇಡಿ. ರಾಷ್ಟ್ರವೇ ಹೆಮ್ಮೆ ಪಡುವಂತೆ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಉಪಸ್ಥಿತರಿದ್ದರು.