ಕಲಬುರಗಿ | ಬೆಳಗುಂಪಾ ಕುರಿಗಾಯಿ ಮೃತ್ಯು ಪ್ರಕರಣ : ಸಾವಿನಲ್ಲಿ ರಾಜಕಾರಣ ಬೇಡವೆಂದ ಕಾಂಗ್ರೆಸ್ ಮುಖಂಡರು

ಕಲಬುರಗಿ : ಚಿತ್ತಾಪುರ ತಾಲೂಕಿನ ಬೆಳಗುಂಪ ಗ್ರಾಮದಲ್ಲಿ ಕುರಿಗಾಯಿಯೊರ್ವ ನದಿಯ ಮರಳಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಕುರಿತು ಬಿಜೆಪಿ ಮುಖಂಡರು ರಾಜಕೀಯ ಮಾಡಬಾರದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕನಕನೂರ್ ಹಾಗೂ ಜಗದೇವ ಗುತ್ತೇದಾರ್ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಯುವಕನನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿದೆ. ಇದಕ್ಕೆ ಸ್ಪಂದಿಸಿದ ಜಮೀನಿನ ಮಾಲಕರು 10 ಲಕ್ಷ ರೂ. ಸಹಾಯ ನೀಡಿದ್ದಾರೆ. ಜೊತೆಗೆ, ಸಂತ್ರಸ್ತ ಕುಟುಂಬಕ್ಕೆ ಒಂದು ಸರಕಾರಿ ನೌಕರಿ, ಮನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ಅನಗತ್ಯವಾಗಿ ರಾಜಕಾರಣ ಮಾಡಬಾರದು ಎಂದರು.
ಮೃತ ಯುವಕನ ತಾಯಿಯೇ ಮಗನ ಸಾವಿನಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ಕಂಡರೆ ಜೇನು ತುಪ್ಪದ ಮೇಲೆ ಬಿದ್ದಂತೆ ಮುಗಿಬೀಳುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೂ ಅವರ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಳಗುಂಪಾ ಗ್ರಾಮದ ಸಂತ್ರಸ್ತ ಮೃತನ ಕುಟುಂಬಕ್ಕೆ ಭೇಟಿ ನೀಡುವುದು ಸರಿಯಲ್ಲ. ಮೊದಲೇ ನೊಂದಿರುವ ಕುಟುಂಬಕ್ಕೆ ಮತ್ತೆ ನೋವು ಕೊಡುವುದು ಬೇಡ ಎಂದು ಹೇಳಿದರು.
ಇದೇವೇಳೆ, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಪ್ರಧಾನಿ ಮೋದಿ ಕಲಬುರಗಿಯ ಭಾಷಣದಲ್ಲಿ ಕೋಲಿ ಸಮಾಜವನ್ನು ಎಸ್.ಟಿ ಪ್ರವರ್ಗಕ್ಕೆ ಸೇರಿಸುವುದಾಗಿ ಹೇಳಿದ್ದರು. ಆ ಮಾತಿನ ಮೇಲೆ ವಿಶ್ವಾಸವಿಟ್ಟು ನಮ್ಮ ಸಮುದಾಯದ ಜನರು ಮತ ಹಾಕಿದ್ದಾರೆ. ಆದರೆ 10 ವರ್ಷ ಕಳೆದರೂ ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವ ಕಾರ್ಯ ಆಗಿಲ್ಲ. ಯಡಿಯೂರಪ್ಪ ಅವರ ಸಮಯದಿಂದಲೂ ಇದನ್ನೇ ಕೇಳುತ್ತಿದ್ದೇವೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತರಿಸಬೇಕು ಎಂದು ಸವಾಲು ಎಸೆದರು.
ಕೇಳದೆ ಇದ್ದವರಿಗೆ ಶೇ.10 ಮೀಸಲಾತಿ ಕೊಟ್ಟಿದ್ದಾರೆ. ನಾವು 1996ರಿಂದ ಕೇಳುತ್ತಿದ್ದರೂ ನಮಗೆ ನ್ಯಾಯ ಕೊಟ್ಟಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಜಗದೇವ ಗುತ್ತೇದಾರ್ ಮಾತನಾಡಿ, ಬಿಜೆಪಿ ನಾಯಕರಿಗೆ ಹೆಣದ ಮೇಲೆ ರಾಜಕೀಯ ಮಾಡುವುದು ರೂಢಿಯಾಗಿದೆ. ಹಾಗಾಗಿ ಯಾರಾದರೂ ಸತ್ತರೆ ತಕ್ಷಣ ಅಲ್ಲಿ ಬಿಜೆಪಿ ನಾಯಕರು ಹಾಜರಾಗುತ್ತಾರೆ. ಇವರಿಗೆ ಕೋಮುಗಲಭೆ, ಹೆಣಗಳ ಮೇಲೆ ರಾಜಕೀಯ ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎಲ್ಲಿಯೇ ಅಕ್ರಮ ಮರಳು ದಂಧೆ ನಡೆದರೂ ಅಂಥವರನ್ನು ಒದ್ದು ಒಳಗೆ ಹಾಕುವಂತೆ ಇತ್ತೀಚಿಗೆ ನಡೆದ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಹ ಇದೇವೇಳೆ ಗುತ್ತೇದಾರ್ ಪ್ರಸ್ತಾಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಪಾಟೀಲ್ ಹರವಾಳ್ ಸೇರಿದಂತೆ ಇತರರಿದ್ದರು.