ಕಲಬುರಗಿ | ಗೋಟೂರ ಬಸ್ ತಂಗುದಾಣದಲ್ಲಿ ʼಪುಸ್ತಕದ ಗೂಡುʼ ಉದ್ಘಾಟನೆ
ಕಲಬುರಗಿ : ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮದ ಬಸ್ ತಂಗುದಾಣದಲ್ಲಿ 'ಪುಸ್ತಕದ ಗೂಡು' ಎಂಬ ಹೆಸರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಉದ್ಘಾಟಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ ಕಮಕನೂರ 'ಪುಸ್ತಕದ ಗೂಡು' ಉದ್ಘಾಟಿಸಿ ಮಾತನಾಡಿ, 'ಓದುಗರ ಸಂಖ್ಯೆ ಏರಿಕೆ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ವತಿಯಿಂದ ಕಾಳಗಿ- ಕಲಬುರಗಿ ಮುಖ್ಯರಸ್ತೆ ಮಾರ್ಗದ ಬಸ್ ತಂಗುದಾಣಕ್ಕೆ ಸುಣ್ಣಬಣ್ಣ ಬಳಿದು ಬರಹ, ಚಿತ್ರಾಕೃತಿಗಳಿಂದ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡಲಾಗಿದೆ' ಎಂದರು.
ವಿವಿಧೆಡೆ ತೆರಳಲು ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇಲ್ಲಿ ಕೆಲಕಾಲ ಪುಸ್ತಕಗಳನ್ನು ಓದಬಹುದು. ದಿನಪತ್ರಿಕೆ, ಕತೆ, ಕಾದಂಬರಿ ಸೇರಿದಂತೆ ವಿವಿಧ ಬಗೆಯ ಜ್ಞಾನವೃದ್ಧಿಗೆ ಇದು ಸಹಕಾರಿಯಾಗಲಿದೆ. ಈ ಪುಸ್ತಕದ ಗೂಡು ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ ತೆರೆದಿರಲಿದೆ. ಪ್ರತಿಯೊಬ್ಬರು ಈ ಪುಸ್ತಕ ಗೂಡಿನ ಲಾಭ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡ ವಿಶ್ವನಾಥರೆಡ್ಡಿ ಮಾಲಿಪಾಟೀಲ, ಬಸವರಾಜ ಕಾಮರೆಡ್ಡಿ, ಬಾಬು ಬುಡನೂರ, ನಾಗರಾಜ ಸಜ್ಜನ, ಕುಪೇಂದ್ರ ಹರಳಯ್ಯ, ಶಿವಶರಣರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುನಾಥ ರಾಠೋಡ, ತಾಲ್ಲೂಕು ಪಂಚಾಯತ್ ಅಧಿಕಾರಿ ರಮೇಶ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ, ಶಿಕ್ಷಕರು, ಪ್ರಯಾಣಿಕರು ಇದ್ದರು.