ಕಲಬುರಗಿ | ಸಿಇಟಿ ಪರೀಕ್ಷೆ ಕೇಂದ್ರದಲ್ಲಿ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಬ್ರಾಹ್ಮಣ ಸಂಘಟನೆಯಿಂದ ಪ್ರತಿಭಟನೆ

ಕಲಬುರಗಿ: ಬೀದರ್ ಮತ್ತು ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ್ದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜನಿವಾರ ಹಾಕೋದು ನಮ್ಮ ಸಂಪ್ರದಾಯ, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ನಿಟ್ಟಿನಲ್ಲಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ರಾಜ್ಯದ ಉತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅವರಿಗೆ ಬೇಕಾದ ಕೋರ್ಸಿಗೆ ಪ್ರವೇಶ ಕೊಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಅವರಿಗೆ ಬೇಕಾದ ಕೋರ್ಸಿಗೆ ಸೇರಲು ಅನುವು ಮಾಡದೇ ಇದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಜಾಗೃತಿ ವಹಿಸಬೇಕು ಎಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೆಂಕಟೇಶ ಕುಲಕರ್ಣಿ, ಗುರುರಾಜ ಜೋಶಿ, ಸುಮಂಗಲಾ ಚಕ್ರವರ್ತಿ , ವೆಂಕಟೇಶ ಚಿತ್ತಾಪೂರ , ಘಂಟಿ ರಾಮಾಚಾರ್ಯ, ಡಿ.ಕೆ. ಕುಲಕರ್ಣಿ, ಕೆ.ಬಿ. ಕುಲಕರ್ಣಿ, ಬಿ.ಜಿ. ದೇಶಪಾಂಡೆ, ಅನಂತ ಕಾಮೇಗಾಂವಕರ್ ಸೇರಿದಂತೆ ಇತರರು ಇದ್ದರು.