ಕಲಬುರಗಿ | ಶಂಕಾಸ್ಪದ ಸಾವು ಪ್ರಕರಣಕ್ಕೆ ತಿರುವು: ತಮ್ಮನಿಂದಲೇ ಅಣ್ಣನ ಕೊಲೆ
ಆಸ್ತಿ ವಿಚಾರವಾಗಿ ಕೃತ್ಯ: ಆರೋಪಿಯ ಬಂಧನ
ಕಾಮಣ್ಣ | ಸುರೇಶ
ಕಲಬುರಗಿ: ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದಲ್ಲಿ ಸುಮಾರು ಎರಡು ತಿಂಗಳ ಹಿಂದೆ ನಡೆದ ಶಂಕಾಸ್ಪದ ಸಾವು ಪ್ರಕರಣ ತಿರುವು ಪಡೆದುಕೊಂಡಿದ್ದು, ತಮ್ಮನೇ ಅಣ್ಣನನ್ನು ಕೊಲೆಗೈದಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಇಟಗಾ ಗ್ರಾಮದ ನಿವಾಸಿ ಕಾಮಣ್ಣ ದೊಡ್ಡ ಹಣಮಂತ (35) ಕೊಲೆಗೀಡಾದ ವ್ಯಕ್ತಿ. ಮೃತರ ತಮ್ಮ ಸುರೇಶ ದೊಡ್ಡ ಹಣಮಂತ ಕೊಲೆ ಆರೋಪಿ ಎಂದು ತನಿಖೆಯಿಂದ ಬಹಿರಂಗಗೊಂಡಿದ್ದು, ಆಸ್ತಿ ವಿಚಾರದ ವೈಮನಸ್ಸಿನಿಂದ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಜುಲೈ 5ರಂದು ಇಟಗಾ ಗ್ರಾಮದಲ್ಲಿ ಕಾಮಣ್ಣ ದೊಡ್ಡ ಹಣಮಂತರ ಮೃತದೇಹ ಅವರ ಮನೆಯ ಸಂದಿಯಲ್ಲಿ ಪತ್ತೆಯಾಗಿತ್ತು. ಮನೆಯ ಛಾವಣಿಯ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬೇಕೆಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಮಗನ ಸಾವಿನ ಕುರಿತು ಸಂಶಯವಿರುವುದಾಗಿ ಎಂದು ಮೃತ ಕಾಮಣ್ಣನ ತಾಯಿ ಪಾರ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಮಣ್ಣರ ಮೃತದೇಹವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಗೋರಿಯಿಂದ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾಮಣ್ಣರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ.23ರಂದು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದರು. ಈ ವೇಳೆ ಆಸ್ತಿ ವಿಚಾರವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಮಣ್ಣರ ಕುಟುಂಬ ಸೇಡಂ ತಾಲೂಕಿನ ತೊಲಮಾಮಡಿ ಗ್ರಾಮದಲ್ಲಿ ಹೊಲವೊಂದನ್ನು ಹೊಂದಿತ್ತು. ಅದನ್ನು ಇತ್ತೀಚೆಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು. ಮಾರಾಟ ಮಾಡುವುದಕ್ಕೆ ಸುರೇಶ ವಿರೋಧ ವ್ಯಕ್ತಪಡಿಸಿದ್ದ. ಆದರೆ ವಿರೋಧವನ್ನು ಲೆಕ್ಕಿಸದೆ ಎರಡು ತಿಂಗಳ ಹಿಂದೆ 56 ಲಕ್ಷ ರೂ.ಗೆ ಹೊಲವನ್ನು ಮಾರಾಟ ಮಾಡಲಾಗಿತ್ತು. ಬಂದ ಹಣವನ್ನು ಕಾಮಣ್ಣ ತಂದೆ-ತಾಯಿ ಹೆಸರಿನಲ್ಲಿ, ಇನ್ನೂ ಸ್ವಲ್ಪ ಹಣವನ್ನು ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ತಮ್ಮ ಸುರೇಶನಿಗೆ ಅದರಲ್ಲಿ ಪಾಲು ಕೊಟ್ಟಿರಲಿಲ್ಲ. ಈ ವಿಚಾರ ಅಣ್ಣ-ತಮ್ಮನ ನಡುವೆ ಜಗಳಕ್ಕೆ ತೀವ್ರ ವೈಮನಸ್ಸಿಗೆ ಕಾರಣವಾಗಿತ್ತೆನ್ನಲಾಗಿದೆ. ಇದೇ ವಿಚಾರವಾಗಿ ಸುರೇಶ ಜು.5ರಂದು ಅಣ್ಣ ಕಾಮಣ್ಣರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುರೇಶ ದೊಡ್ಡ ಹಣಮಂತನನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ತಂಡವಾದ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಸೈಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮ (ತನಿಖೆ), ಎಎಸ್ಸೈ ಲಾಲ್ ಅಹ್ಮದ್, ಸಿಬ್ಬಂದಿ ನಾಗೇಂದ್ರ, ಬಸವರಾಜ, ಚಂದ್ರಶೇಖರ, ಸವಿಕುಮಾರ, ಅಯ್ಯಣ್ಣ, ಸಿದ್ದರಾಮೇಶ, ಈರೇಶ, ವೀರಭದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.