ಕಲಬುರಗಿ | ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಜ.22 ರಂದು ಕಲಬುರಗಿ ಬಂದ್‌ಗೆ ಕರೆ
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಯಾಗಿರುವ ತೊಗರಿ ಈ ಸಲ ಬಹಳಷ್ಟು ನಷ್ಟವಾಗಿದೆ, ಕೂಡಲೆ ಇದಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ ಕಲಬುರಗಿ ಸಮಿತಿ ಜ.22ರಂದು ಕಲಬುರಗಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಸಮಿತಿಯ ಮುಖಂಡರಾದ ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ 6.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ, ಕೂಡಲೇ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಒಣಗಿದ ತೊಗರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಒಣಗಿದ ತೊಗರಿಗೆ ಬೆಳೆ ವಿಮೆ ಮಾಡಬೇಕು, ಪ್ರತಿ ಕ್ವಿಂಟಾಲ್ ತೊಗರಿಗೆ 12,550 ರೂ. ಬೆಂಬಲ ಬೆಲೆ, ಸಿಎಂ ಆವರ್ಥ ನಿಧಿಯಿಂದ 500 ರೂ. ಪ್ರೋತ್ಸಾಹಧನ ನೀಡಬೇಕು, ತೊಗರಿ ಮಂಡಳಿಗೆ ಪ್ರತ್ಯೇಕ 25 ಕೋಟಿ ರೂ. ಮೀಸಲಿಡಬೇಕು, ಕಾಫಿ ಮಂಡಳಿಗೆ ತೋರುತ್ತಿರುವ ಕಾಳಜಿಯನ್ನು ತೊಗರಿ ಮಂಡಳಿಗೂ ಮುತುವರ್ಜಿ ವಹಿಸಬೇಕು ಎಂದರು.
ರೈತರು ಬೆಳೆದಿರುವ ಇತರ ಬೆಳೆಗಳಿಗೆ ಎಂಎಸ್ಪಿ ನಿರ್ಣಯಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕಲಬುರಗಿ ಬಂದ್ ಗೆ ಕರೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಆರ್.ಕಲ್ಲೂರ್, ಅರ್ಜುನ್ ಗೊಬ್ಬೂರ್, ಭೀಮಾಶಂಕರ ಮಾಡಿಯಾಳ, ಎಂ.ಬಿ ಸಜ್ಜನ್, ದಿಲೀಪ್ ನಾ, ಬಾಬು ಹೂವಿನಹಳ್ಳಿ, ಮುಬೀನ್ ಅಹ್ಮದ್, ಮಂಜು ಸಿಂಗೆ, ಮಹಾಂತೇಶ್ ಜಮಾದಾರ್ ಸೇರಿದಂತೆ ಇತರರು ಇದ್ದರು.