ಕಲಬುರಗಿ | ದಿನನಿತ್ಯ ಕನ್ನಡ ಬಳಸಿದಾಗ ಮಾತ್ರ ಉಳಿಸಲು ಸಾಧ್ಯ : ಪ್ರಲ್ಹಾದ್ ಭುರ್ಲಿ
ಕಲಬುರಗಿ : ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವುದರಿಂದ ಮಾತ್ರ ಅದನ್ನು ಉಳಿಸಲು ಸಾಧ್ಯವೆಂದು ಆರ್.ಜೆ. ಕಾಲೇಜಿನ ಪ್ರಾಚಾರ್ಯರು ಪ್ರಲ್ಹಾದ್ ಭುರ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಇಲ್ಲಿನ ಕನ್ನಡ ಭವನದಲ್ಲಿ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ʼಮೊಬೈಲ್ ಬಿಡಿ, ಪುಸ್ತಕ ಹಿಡಿʼ ಎಂಬ ಘೋಷವಾಕ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಅರಿವು ಪ್ರತಿಯೊಬ್ಬ ಕನ್ನಡಿಗ ಹೊಂದಬೇಕಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿ, ಈ ವರ್ಷದ ರಾಜ್ಯೋತ್ಸವ ಸಂದರ್ಭದಲ್ಲಿ ತಿಂಗಳು ಪೂರ್ತಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು ಮಾಡಬೇಕೆನ್ನುವ ಆಶೆಯ ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
'ಕನ್ನಡ ನಾಡಿನ ಹಿರಿಮೆ ಗರಿಮೆ' ಕುರಿತು ಏರ್ಪಡಿಸಿದ ಪ್ರಬಂಧ ಹಾಗು 'ಕರ್ನಾಟಕದ ಹಿತವೈಭವ' ಕುರಿತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ನೂರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಾಣಿಜ್ಯ ಉಪನ್ಯಾಸಕರಾದ ಜ್ಯೋತಿ ಸಿ. ಪಾಟೀಲ ಮಾತನಾಡಿದರು. ಕ.ಸಾ.ಪ. ಪದಾಧಿಕಾರಿಗಳಾದ ಧರ್ಮರಾಜ ಜವಳಿ, ಸಿದ್ದಲಿಂಗ ಬಾಳಿ, ರಮೇಶ ಬಡಿಗೇರ, ಬಾಬುರಾವ ಶೇರಿಕಾರ, ಎಂ.ಎನ್. ಸುಗಂಧಿ, ರಾಜೇಂದ್ರ ಮಾಡಬೊಳ, ಮಳೇಂದ್ರ ಹಿರೇಮಠ, ಮಂಜುಳಾ ಪಾಟೀಲ, ರೇಣುಕಾ ಡಾಂಗೆ, ಪರ್ವಿನ್ ಸುಲ್ತಾನಾ, ರಮೇಶ ಪವಾರ, ನಾಗರಾಜ ಪಾಟೀಲ ಉಪಸ್ಥಿತರಿದ್ದರು.