ಕಲಬುರಗಿ | ಜಾತಿ ಗಣತಿ ವರದಿಯಲ್ಲಿ ಕುರುರಹಿನಶೆಟ್ಟಿ ಸಮಾಜಕ್ಕೆ ಅನ್ಯಾಯ : ಯಡವಳ್ಳಿ ಆರೋಪ

ಕಲಬುರಗಿ : ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕಾಂತರಾಜ - ಹೆಗಡೆ ಆಯೋಗದ ಜಾತಿ ಗಣತಿ ವರದಿಯಲ್ಲಿ ಕುರುರಹಿನಶೆಟ್ಟಿ ಸಮಾಜಕ್ಕೆ ಅನ್ಯಾಯ ಎಸಗಲಾಗಿದೆ, ಇದನ್ನು ನಾವು ವಿರೋಧಿಸುತ್ತೇವೆ ಎಂದು ಸಮುದಾಯದ ಮುಖಂಡ ಕುಶಾಲ ಯಡವಳ್ಳಿ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವರದಿಯಲ್ಲಿ ನೀಡಿರುವ ನಮ್ಮ ಸಮಾಜದ ಜನಸಂಖ್ಯೆಯ ಅಂಕಿಅಂಶಗಳು ಸತ್ಯಕ್ಕೆ ದೂರವಿದ್ದು, ರಾಜ್ಯದಾದ್ಯಂತ ನಮ್ಮ ಸಮಾಜದ ಜನಸಂಖ್ಯೆಯೂ 12 ಲಕ್ಷಕ್ಕೂ ಮೀರಿದೆ. ಆದರೆ ಇವರು ಅವೈಜ್ಞಾನಿಕ ಸಮೀಕ್ಷೆ ನಡೆಸಿ, ಕೇವಲ 1,53,193 ಮಾತ್ರ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ನಮ್ಮ ಸಮಾಜದ ಜನಸಂಖ್ಯೆ ಕಡಿಮೆ ತೋರಿಸಾಗುತ್ತಿದೆ. ಇದರಲ್ಲಿ ರಾಜಕೀಯ ಶದ್ಯಂತ್ರವೂ ನಡೆದಿದೆ. ಹಾಗಾಗಿ ಇದನ್ನು ಜಾರಿಗೊಳಿಸಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ಮುಂಬರುವ ಸಂಪುಟ ಸಭೆಯಲ್ಲಿ ಕ್ಯಾಬಿನೆಟ್ ಸಚಿವರು ಒಂದು ವೇಳೆ ಇದನ್ನ ಒಪ್ಪಿದರೆ, ರಾಜ್ಯದಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ನೇಕಾರ ಸಮುದಾಯದಲ್ಲಿ ಒಟ್ಟು 27 ಪಂಗಡಗಳು ಸೇರಿವೆ. ಆಯಾ ಉಪಜಾತಿಗಳಲ್ಲಿ ಯಾವುದೇ ರೀತಿಯ ಸಮೀಕ್ಷೆ ನಡೆಸದೆ 10 ವರ್ಷದ ಹಿಂದಿನ ಸಮೀಕ್ಷೆಯನ್ನು ಮನೆಯಲ್ಲೇ ಕುಳಿತುಕೊಂಡು ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಕರದಳ್ಳಿ, ಚಂದ್ರಶೇಖರ್ ಮ್ಯಾಳಗಿ, ಮಲ್ಲಿಕಾರ್ಜುನ್ ಕುಂಟೋಜಿ, ಅಶೋಕ್, ಶಿವಕುಮಾರ್ ಹತ್ತಿಕಟ್ಟಿ, ಸಾಗರ್ ನಂದಿ, ಮಲ್ಲಿಕಾರ್ಜುನ್ ಶ್ಯವಿ, ವಿನೋದ ಜನೆವರಿ ಸೇರಿದಂತೆ ಇನ್ನಿತರರು ಇದ್ದರು.