ಕಲಬುರಗಿ | ಕ್ರಷರ್- ಬೈಕ್ ನಡುವೆ ಢಿಕ್ಕಿ : ಬೈಕ್ ಸವಾರ ಮೃತ್ಯು, ಹಲವರಿಗೆ ಗಾಯ
ಕಲಬುರಗಿ : ಕ್ರಷರ್ -ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರನೊರ್ವ ಸ್ಥಳದಲ್ಲಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಗರದ ಹೊರವಲಯದ ಕೆರೂರ್ ಗ್ರಾಮದ ಸಮೀಪ ನಡೆದಿದೆ.
ಕೆರೂರ್ ಗ್ರಾಮದ ನಿವಾಸಿ ಉಮೇಶ್ ಹರಿರಾಮ್ ಚೌಹಾಣ್ (39) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕ್ರಷರ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅದೇ ಗ್ರಾಮದ ಕ್ರಷರ್ ಚಾಲಕ ಕೃಷ್ಣ ನಾಗೇಶ್ ಬೋರೆ, ಅಲಗುಡ್ ಕ್ರಾಸ್ ನಿಂದ ಕಾರ್ಖನೆಯೊಂದರ ಕೂಲಿ ಕಾರ್ಮಿಕರಿಗೆ ಕೂರಿಸಿಕೊಂಡು ಹೇರೂರು ಗ್ರಾಮದ ಕಡೆ ತೆರಳುತ್ತಿದ್ದ. ಚಾಲಕ ಕೃಷ್ಣ ಅತಿವೇಗದಿಂದ ಕ್ರಷರ್ ಚಲಾಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತಾಗಿ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ 2ರಲ್ಲಿ ಪ್ರಕರಣ ದಾಖಲಾಗಿದೆ.
Next Story