ಕಲಬುರಗಿ | ಕಲಾವಿದರ ಪ್ರತಿಭೆ ಹೊರತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ : ಬಿ.ಫೌಝಿಯಾ ತರನ್ನುಮ್
ಶಿಶಿರೋತ್ಸವ ಸಂಭ್ರಮ-2025ಕ್ಕೆ ತೆರೆ

ಕಲಬುರಗಿ : ಸ್ಥಳೀಯ ಕಲಾವಿದರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಶಿಶಿರೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಅಪ್ಪನೆ ತೆರೆ ನಿರ್ವಹಣಾ ಪ್ರಾಧಿಕಾರದಿಂದ ಕಳೆದ ಮೂರು ದಿನಗಳಿಂದ ನಡೆದ ʼಶಿಶಿರೋತ್ಸವ ಸಂಭ್ರಮ-2025ʼರ ಸಮಾರೋಪ ಸಮಾರಂಭದಲ್ಲಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಜಾನಪದ ಸಂಗೀತ, ಸುಗಮ ಸಂಗೀತ, ಡೊಳ್ಳು ಕುಣಿತ, ತಬಲಾ ವಾದನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳು, ಸಾರ್ವಜನಿಕರಿಗೆ ಮೊನೋರಂಜನೆ ನೀಡಲು ಯಶಸ್ವಿಯಾಗಿದೆ ಎಂದರು.
ಸ್ಥಳೀಯ ಚಲನಚಿತ್ರ ನಟ ಕ್ರಾಂತಿ ಮಾತನಾಡಿ, ಶಿಕ್ಷಣದ ಜೊತೆ ಹಾಡು, ನೃತ್ಯ ಕಲಿಯಬೇಕು. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದು ಸ್ಥಳೀಯ ಕಲಾವಿದರು ದೇಶ, ವಿದೇಶ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರರಾದ ವೆಂಕಣಗೌಡ, ಶಾರದಾ ಬಿರಾದಾರ ಸೇರಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ಸಿಬ್ಬಂದಿ ವರ್ಗ ಮೊದಲಾದವರು ಇದ್ದರು. ಶಶಿಕಲಾ ಜಡೆ ನಿರೂಪಿಸಿದರು.
ಮೂರು ದಿನಗಳ ಶಿಶಿರೋತ್ಸಕ್ಕೆ ತೆರೆ ಬಿದ್ದಿದ್ದು, ರವಿವಾರ ಸಂಜೆ ತಂಪಾದ ವಾತಾವರಣದಲ್ಲಿ ಜಯತೀರ್ಥ ಕುಲಕರ್ಣಿ ಅವರಿಂದ ಕೊಳಲು ವಾದನ, ಗೋಪಿ ಕುಲಕರ್ಣಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಮೂಡಿಬಂತು. ಕುಸನೂರು ಮಾಳಿಂಗರಾಯ ಮತ್ತು ತಂಡದಿಂದ ಅದ್ಭುತ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು. ಶ್ರೀಶೈಲ್ ಘೂಳಿ ಮತ್ತು ತಂಡದಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಹಾಗೂ ನಾಟ್ಯಂಜಲಿ ನೃತ್ಯ ಕಲಾತಂಡದ ನಿರ್ದೇಶಕಿ ಸಂಧ್ಯಾ ಪುರಂದರ ಭಟ್ ತಂಡದಿಂದ ನೃತ್ಯ ಕಲಾ ವೈಭವ ನೆರೆದ ಕಲಾ ಪ್ರೇಮಿಗಳನ್ನು ಮನೋರಂಜನೆಗೊಳಿಸಲು ಯಶಸ್ವಿಯಾದವು.