ಕಲಬುರಗಿ | ತಾರ್ಫೈಲ್ನಲ್ಲಿ ಕಳಪೆ ಮನೆಗಳ ನಿರ್ಮಾಣ : ಪರಿಶೀಲನೆಗೆ ಕಲ್ಯಾಣ ಕರ್ನಾಟಕ ಸೇನೆ ಒತ್ತಾಯ
ಕಲಬುರಗಿ : ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 2018-19ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕಲಬುರಗಿ ನಗರದ ತಾರ್ಫೈಲ್ ಬಡಾವಣೆಯಲ್ಲಿ ನಿರ್ಮಿಸಿದ ಮನೆಗಳು ಕಳಪೆಯಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದರ ಜೊತೆಗೆ ಫಲಾನುಭವಿಗಳಿಗೆ ಹಣ ಸಂದಾಯಿಸುವಂತೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಸೇನೆಯ ಮುಖಂಡ ಗುಂಡೇಶ ಎಂ.ಶಿವನೂರ ಮತ್ತು ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಾರ್ಡ್ ನಂ.54ರಲ್ಲಿ ಬರುವ ತಾರ್ಫೈಲ್ ಪ್ರದೇಶದಲ್ಲಿ 350ಕ್ಕೂ ಹೆಚ್ಚು ಮನೆಗಳ ಪೈಕಿ 300 ಮನೆಗಳನ್ನು ನಿರ್ಮಿಸಲಾಗಿದೆ. ಆ ಮನೆಗಳೆಲ್ಲ ನಿರ್ಮಾಣ ಅವೈಜ್ಞಾನಿಕ ಮತ್ತು ಕಳಪೆಯಾಗಿರುವುದರಿಂದ ಮನೆಗಳು ಶಿಥಿಲಗೊಂಡು ಬೀಳುವ ಹಂತಕ್ಕೆ ಬಂದಿವೆ ಎಂದು ಆರೋಪಿಸಿದರು.
ಮನೆಗಳು ಕಳಪೆಯಾಗಿರುವುದರಿಂದ ಮಳೆಗಾಲದಲ್ಲಿ ಸೋರುತ್ತಿವೆ. ಈ ಕುರಿತು ಮಂಡಳಿಗೆ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆ ನಿರ್ಮಿಸಿಕೊಂಡ ತಕ್ಷಣ ಹಣ ಬಿಡುಗಡೆಗೊಳಿಸಲಾಗುವುದು ಎಂದು ಇಂಜಿನಿಯರ್ಗಳು ಹೇಳಿರುವುದರಿಂದ ಸುಮಾರು 50 ಮನೆಗಳ ಫಲಾನುಭವಿಗಳು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಅವರಿಗೆ ಹಣ ನೀಡಿಲ್ಲ. ಇದರಿಂದಾಗಿ ಅವರು ಸೋರಿಕೆ ಮನೆಯಲ್ಲಿಯೇ ವಾಸವಿದ್ದು, ಈ ಕಡೆ ಸಾಲ ಕಟ್ಟಲಾಗದೆ ಇನ್ನೊಂದಡೆ ಬೇರೆ ಕಡೆಗೆ ಹೋಗಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಸಾಲ ಮಾಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ ನೀಡಲು ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಇದೇ ಡಿ.22 ರಂದು ನಗರಕ್ಕೆ ಬರುವ ಸಿಎಂ ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ, ರಾಹುಲ, ಮರೆಮ್ಮ, ದುರ್ಗಮ್ಮ, ಮಹಾಂತಪ್ಪ ಮತ್ತಿತರರು ಇದ್ದರು.