ಕಲಬುರಗಿ: ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ; ಹಲವರಿಗೆ ಗಾಯ
ಕಲಬುರಗಿ: ಅಡುಗೆ ಅನಿಲ ಸಿಲಿಂಡರ್ ಖಾಲಿಯಾಗಿದ್ದರಿಂದ ಬೇರೊಂದು ಸಿಲಿಂಡರ್ ಗೆ ಪೈಪ್ ಕನೆಕ್ಷನ್ ಕೊಡುವಾಗ ಸಿಲಿಂಡರ್ ಸ್ಫೋಟಗೊಂಡು ನಾಲ್ವರ ಸ್ಥಿತಿ ಚಿಂತಜನಕವಾಗಿದ್ದು, 9 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ನಗರದ ಶ್ರೀ ಶರಣಬಸವೇಶ್ವರ ಕೆರೆ ಬಳಿಯ ಸಪ್ತಗಿರಿ ಹೊಟೇಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಶಿಕಲಾ, ರಮೇಶ್ ಫಿರೋಜಾಬಾದ್, ಅವರ ಪುತ್ರಿ ಅಂಬಿಕಾ ಹಾಗೂ ಪುತ್ರ ಮಲ್ಲಿನಾಥ, ರಾಕೇಶ್, ಶಂಕರ್, ಗುರುಮೂರ್ಥಿ, ಪ್ರಶಾಂತ, ಸತ್ಯವಾನ್, ಅಪ್ಪರಾಯ್, ಮಲ್ಲಿನಾಥ್, ವಿಠ್ಠಲ, ಮಹೇಶ್ ಮತ್ತು ಲಕ್ಷ್ಮಣ ಗಾಯಗೊಂಡಿದ್ದಾರೆ.
ನಾಲ್ವರ ಸ್ಥಿತಿ ಚಿಂತಜನಕವಾಗಿದೆ ಎಂದು ತಿಳಿದುಬಂದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೆಲ ಮಹಡಿಯ ಕಿಚನ್ ರೂಂನಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಹೊಟೇಲ್ ನ ಇಡೀ ಕಟ್ಟಡ ಬಾಗಿಲು, ಕಿಟಕಿಗಳು ಒಡೆದು ನುಚ್ಚು ನೂರಾಗಿವೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಆರ್.ಚೇತನ್ ಕುಮಾರ್, ಎಸಿಪಿ ಕನ್ನಿಕಾ ಶಿಖಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.