ಕಲಬುರಗಿ | ದಲಿತ ಯುವಕನ ಹತ್ಯೆ ಪ್ರಕರಣ ; 5 ಮಂದಿ ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕಲಬುರಗಿ: ಸಿಗರೇಟ್ ಪ್ಯಾಕೇಟ್ಗಳಿದ್ದ ಬಾಕ್ಸ್ ಕದ್ದಿದ್ದಕ್ಕೆ ಖಾಸಗಿ ಬ್ಲಡ್ ಬ್ಯಾಂಕ್ ಮಾಲಕನೊಬ್ಬ ಇತರ ಸಹಚರರೊಂದಿಗೆ ಸೇರಿಕೊಂಡು ತನ್ನ ಬಳಿ ಕೆಲಸ ಮಾಡುತ್ತಿದ್ದ ದಲಿತ ಯುವಕನ್ನು ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿರುವ ಬ್ಲಡ್ ಬ್ಯಾಂಕ್ ಮಾಲಕ ಖೂಬಾ ಪ್ಲಾಟ್ ನಿವಾಸಿ ಚಂದ್ರಶೇಖರ ಮಲ್ಲಿನಾಥ ಪಾಟೀಲ್(33), ಬೀದರ್ ಜಿಲ್ಲೆಯ ಕಮಲನಗರ ನಿವಾಸಿ ಆದೇಶ ಅಲಿಯಾಸ್ ಆದಿತ್ಯ ಶಿವಾಜಿರಾವ್ (25), ಕಮಲಾಪುರ್ ತಾಲೂಕಿನ ಸ್ವಂತ ಗ್ರಾಮದ ರಾಹುಲ್ ಪಾಟೀಲ್(19), ಬೀದರ್ ನ ಓಂ ಪ್ರಕಾಶ್ ಬಾಲಾಜಿರಾವ್ (20), ಸಂತ್ರಸ್ವಾಡಿಯ ನಿವಾಸಿ ಅಶ್ಫಾಕ್ ಹಸನ್ ಪಟೇಲ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಡಿ.12ರಂದು ನಗರದ ಪ್ರಗತಿ ಕಾಲೋನಿ ನಿವಾಸಿ ಶಶಿಕಾಂತ ಮಲ್ಲಿಕಾರ್ಜುನ ನಾಟೀಕಾರ (25) ಎಂಬಾತನನ್ನು ಸಿಗರೇಟ್ ಪ್ಯಾಕೆಟ್ ಕದ್ದಿದ್ದಕ್ಕಾಗಿ ಆರೋಪಿಗಳು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದರು, ಅಲ್ಲದೆ 1.40 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್ ಅನ್ನು ಕದ್ದ ಆರೋಪದ ಮೇಲೆ ಆರೋಪಿ ಚಂದ್ರಶೇಖರ್ ಪಾಟೀಲ್, ಅಷ್ಟೂ ಹಣವನ್ನು ದಂಡದ ರೂಪದಲ್ಲಿ ಕಟ್ಟುವಂತೆ ಒತ್ತಡ ಹೇರಿದ್ದರು ಎಂದು ಮೃತ ಯುವಕ ಶಶಿಕಾಂತ ಅವರ ತಂದೆ ಮಲ್ಲಿಕಾರ್ಜುನ್ ಅವರು ಇಲ್ಲಿನ ಎಂಬಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನನ್ವಯ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಎಂ.ಬಿ. ನಗರ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ನಗರ ಪೊಲೀಸ್ ಆಯುಕ್ತರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.