ಕಲಬುರಗಿ | ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಗೃಹ ಬಳಕೆ ಸಾಮಗ್ರಿಗಳಿಗೆ ಹಾನಿ: ಪರಿಹಾರಕ್ಕೆ ಆಗ್ರಹ

ಕಲಬುರಗಿ : ಅಳಂದ ಪಟ್ಟಣದ ಜೈನಬ್ ಕಾಲೊನಿ ಮತ್ತು ಶ್ರೀನಿವಾಸ ಕಾಲೊನಿ, ಸಂಗಾ ಲೇಔಟ್ ನಲ್ಲಿನ ವಿದ್ಯುತ್ ಪೂರೈಕೆ ಅತ್ಯಂತ ಅನಿಯಮಿತವಾಗಿದ್ದು, ತೀವ್ರವಾದ ವೋಲ್ಟೇಜ್ ಏರಿಳಿತದಿಂದ ಅನೇಕ ಮನೆಗಳಲ್ಲಿನ ವಿದ್ಯುತ್ ಸಾಧನಗಳು ಹಾನಿಗೊಳಗಾಗಿವೆ, ಲಕ್ಷಾಂತರ ರೂಪಾಯಿ ಸಾಮಗ್ರಿಗಳ ಸುಟ್ಟು ಹಾನಿಯಾಗಿದ್ದು, ಪರಿಹಾರ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಬಡಾವಣೆಯ ನಿವಾಸಿಗಳು ದೂರು ನೀಡಿದ್ದಾರೆ.
ಎ. 8 ರಂದು ಬೆಳಿಗ್ಗೆ 2.30 ರಿಂದ 3.00ರ ನಡುವೆ ಹಾಗೂ ಎ. 9ರಂದು ಬೆಳಿಗ್ಗೆ 4.30 ರಿಂದ 5.30 ರ ನಡುವೆ ನಡೆದ ವಿದ್ಯುತ್ ವ್ಯತ್ಯಯದಿಂದ ಇನ್ವೆರ್ಟರ್, ಫ್ಯಾನ್, ಟ್ಯೂಬ್ಲೈಟ್, ಬೋರ್ವೆಲ್ ಕಂಟ್ರೋಲ್ ಪ್ಯಾನಲ್, ಅಡಾಪ್ಟರ್ ಹಾಗೂ ಒಳಗಿನ ವೈಯರಿಂಗ್ ಕೂಡ ನಾಶವಾಗಿದೆ. ರಕ್ಷಣಾ ಸಾಧನಗಳಿದ್ದರೂ ಈ ವಿಪರ್ಯಾಸದಿಂದ ತಪ್ಪಿಸಿಕೊಳ್ಳಲಾಗಲಿಲ್ಲವೆಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಇದರ ಬಗ್ಗೆ ಹಲವು ಬಾರಿ ಜೆಸ್ಕಾಂಗೆ ದೂರು ನೀಡಿದರೂ ಸ್ಪಂದನೆ ಇಲ್ಲದೆ ನಿರ್ಲಕ್ಷ್ಯ ನಡೆಸಲಾಗಿದೆ. ಇನ್ನೂ ಹಲವು ಮನೆಗಳಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದ್ದು, ನಿವಾಸಿಗಳಿಗೆ ಸಾವಿರಾರು ರೂಪಾಯಿಗಳ ನಷ್ಟವಾಗಿದೆ. ಯಾವುದೇ ರಕ್ಷಣೆ ಇಲ್ಲದೆ ವಿದ್ಯುತ್ ನೀಡುವ ಮೂಲಕ, ಜೆಸ್ಕಾಂ ವಿದ್ಯುತ್ ಕಾಯ್ದೆ, 2003ರ ಉಲ್ಲಂಘನೆ ಮಾಡುತ್ತಿದೆ ಎಂದು ನಿವಾಸಿ ವಿಜಯ ಎಂ.ಕಟಕೇ ಸೇರಿ ಬಡಾವಣೆಯ ನಿವಾಸಿಗಳು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.
ಜೆಸ್ಕಾಂ ಅಧಿಕಾರಿಗಳಿಂದ ಸ್ಪಷ್ಟನೆ ಹಾಗೂ ಪರಿಹಾರ ನೀಡಬೇಕು. ಇಂತಹ ಘಟನೆಗಳು ಪುನರಾವೃತವಾಗದಂತೆ ತ್ವರಿತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನಿನ ಮೊರೆಹೋಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.