ಕಲಬುರಗಿ | ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಖಡ್ಗಕ್ಕೆ ಹಾನಿ ; ಆರೋಪಿ ಪೊಲೀಸ್ ವಶಕ್ಕೆ
ಕಲಬುರಗಿ : ನಗರದ ಸೂಪರ್ ಮಾರ್ಕೆಟ್ ಸಮೀಪದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯ ಖಡ್ಗವನ್ನು ಮುರಿದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ವಿಚಾರಣೆಯಿಂದ ಆರೋಪಿಯು ಮಾನಸಿಕ ಅಸ್ವಸ್ಥನೆಂದು ಕಂಡುಬಂದಿದ್ದು, ಆರೋಪಿಯ ಮಾನಸಿಕ ವೈದ್ಯಕೀಯ ಪರೀಕ್ಷೆ ಹಾಗೂ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಶಾಂತ ರೀತಿಯಿಂದ ವರ್ತಿಸಲು ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ರಾಯಣ್ಣನ ಖಡ್ಗ ವಿರೂಪಗೊಳಿಸಿದ್ದನ್ನು ಖಂಡಿಸಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವತಿಯಿಂದ ರವಿವಾರ ರಾತ್ರಿ ಪ್ರತಿಭಟನೆ ನಡೆಸಲಾಗಿತ್ತು.
ಸ್ಥಳೀಯ ಶಾಸಕ ಮತ್ತು ಪೊಲೀಸರು ನೀಡಿದ ಭರವಸೆಯಿಂದ ಪ್ರತಿಭಟನಕಾರರು ಪ್ರತಿಭಟನೆಯನ್ನು ಮೊಟಕುಗೊಳಿಸಿದ್ದರು.