ಶಿಕ್ಷಣದಿಂದಲೇ ಭಾಷೆ, ಸಂಸ್ಕೃತಿಗಳ ಅಭಿವೃದ್ಧಿ: ಕಲಬುರಗಿ ಡಿಸಿ ಫೌಝಿಯಾ ತರನ್ನುಮ್
ಜಿಲ್ಲಾಧಿಕಾರಿಗೆ 'ಕನ್ನಡದ ಚಿನ್ನ' ಪ್ರಶಸ್ತಿ ಪ್ರದಾನ

ಕಲಬುರಗಿ: ನಮ್ಮ ಭಾಷೆ ಮತ್ತು ಸಂಸ್ಕೃತಿಗಳು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದಲೇ ಸಾಧ್ಯ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುರುವಾರದಂದು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ “ಕನ್ನಡದ ಚಿನ್ನ 2024” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ, ಅವರು ಮಾತನಾಡಿದರು.
ಇತಿಹಾಸ ಮತ್ತು ಸಂಸ್ಕೃತಿಗಳ ಪರಂಪರೆ ಹೊಂದಿದ ಈ ನೆಲದಲ್ಲಿ ಕನ್ನಡದ ಪ್ರೀತಿ ಅಭಿಮಾನಗಳು ಮುಖ್ಯ. ಯಾವುದೇ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಪಡೆಯಬೇಕು. ಮಹಿಳೆಯರು ಮಾತೃ ಭಾಷೆಯ ಶಿಕ್ಷಣ ಪಡೆಯುವ ಮೂಲಕ ಪ್ರತಿ ಕ್ಷೇತ್ರದಲ್ಲಿ ಗುರಿ ಸಾಧಿಸಬೇಕು. ಇಂಥ ನೆಲದಲ್ಲಿ ನಾವೆಲ್ಲ ಕೃತಜ್ಞರಾಗಿ ಸೇವೆ ಮಾಡುವ ಅವಕಾಶ ದೊರೆತ್ತಿರುವುದು ಹೆಮ್ಮೆ ಪಡುವಂತ್ತಾಗಿದೆ. ನಾನೂ ಕೂಡ ಈ ನೆಲದ ಮಗಳೆಂಬ ಅಭಿಮಾನ ಹೊಂದಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದರು.
ಇಂದು ಜಿಲ್ಲಾಧಿಕಾರಿಯಾಗಿ ಮಾಡುತ್ತಿರುವ ಸೇವೆ ನಮಗೆ ತೃಪ್ತಿ ತಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಚಿನ್ನ ಪ್ರಶಸ್ತಿ ಕೊಟ್ಟಿರುವುದು ನಮ್ಮ ಜೀವನದಲ್ಲಿ ಮರೆಯಲಾರದ ಅದ್ಭುತ ಕ್ಷಣಗಳು. ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕಾರ್ಯಗಳು ನಿಜಕ್ಕೂ ಅಭಿಮಾನ ಪಡುವಂಥವು. ಈ ಸೇವೆ ಸದಾ ಅನನ್ಯ ಎಂದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಪೂಜ್ಯ ಡಾ. ದಾಕ್ಷಾಯಿಣಿ ಎಸ್ ಅಪ್ಪಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಿ.ಫೌಝಿಯಾ ತರನ್ನುಮ್ ಅವರು ಎಲ್ಲಾ ಕ್ಷೇತ್ರಗಳಲ್ಲಿನ ಸೇವೆ ಅನುಕರಣೀಯ. ಅವರಲ್ಲಿನ ಕನ್ನಡದ ತುಡಿತ ಮತ್ತು ಭಾಷಾಭಿಮಾನಗಳು ನಮಗೆಲ್ಲ ಪ್ರೇರಣೆ ನೀಡಿವೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಕನ್ನಡದ ಚಿನ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಜತೆಗೆ ಭಾರತ ಚುನಾವಣಾ ಇಲಾಖೆಯಿಂದ ಉತ್ತಮ ಚುನಾವಣಾಧಿಕಾರಿ ಎಂದು ಪ್ರಶಸ್ತಿಗೆ ಆಯ್ಕೆ ಆಗಿರುವುದು ಇಡೀ ಜಿಲ್ಲೆ ಹೆಮ್ಮೆ ಪಡುವಂಥದಾಗಿದೆ, ಇಂಥಹ ಜಿಲ್ಲಾಧಿಕಾರಿಗಳಿಂದ ನಾಡು ನುಡಿಗಳ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಈ ನೆಲವನ್ನು ಪ್ರೀತಿಸಿ ಕಳಕಳಿ ಹೊಂದಿರುವ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಾತೃಭಾಷೆ ಕಲಿಯುವ ಮೂಲಕ ಭಾಷಾಭಿಮಾನ ತೋರಿದ್ದಾರೆ. ಇಂಥಹ ಕನ್ನಡದ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಅಭಿಮಾನ ಬೆಳೆಸಿ ನಾಡಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿನಂದಿಸಿದರು. ಶ್ರೇಷ್ಠ ಕವಿಗಳ ವಾಣಿಯಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಮತ್ತು ಪರಿಷತ್ತಿನ ಕಾರ್ಯಕ್ರಮಗಳು ನಿತ್ಯೋತ್ಸವದ ರೀತಿಯಲ್ಲಿ ನಿತ್ಯ ನೂತನವಾಗಿ ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು.
ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ ಮತ್ತಿತರರಿದ್ದರು.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಭವಾನಿಸಿಂಗ್ ಠಾಕೂರ್, ದೇವೇಂದ್ರಪ್ಪ ಆವಂಟಿ, ರವೀಂದ್ರ ಶಾಬಾದಿ, ರವೀಂದ್ರಕುಮಾರ ಭಂಟನಳ್ಳಿ, ನಾಗರಾಜ ಜಮದರಖಾನಿ, ಚೆನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಗಣೇಶ ಚಿನ್ನಾಕಾರ, ಪ್ರಭವ ಪಟ್ಟಣಕರ್, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ರೇಣುಕಾ ಸರಡಗಿ, ಗೌರಮ್ಮ ಮಾಕಾ, ಅಮೃತಪ್ಪ ಅಣೂರ, ಮಲ್ಲಿನಾಥ ದೇಶಮುಖ, ವಿಜಯಕುಮಾರ ಸೂಗಿ, ರೇವಣಸಿದ್ದಪ್ಪ ಜೀವಣಗಿ, ಮಂಜುನಾಥ ಕಂಬಾಳಿಮಠ, ಡಾ. ಕೆ.ಎಸ್. ಬಂಧು, ರವಿಕುಮಾರ ಶಹಾಪೂರಕರ್, ವೀರೇಂದ್ರಕುಮಾರ ಕೊಲ್ಲೂರ, ಶಿವಲೀಲಾ ಕಲಗುರ್ಕಿ, ಸಂತೋಫ ಕುಡಳ್ಳಿ, ಡಾ. ರೆಹಮಾನ್ ಪಟೇಲ್, ಮಹ್ಮದ್ ಅಯಾಜೋದ್ದೀನ್ ಪಟೇಲ್, ಕಿರಣ ಗೋಡಬಾಲೆ, ಶಿವಲಿಂಗಪ್ಪ ಅಷ್ಟಗಿ, ವಿನೋದ ಜೇನವೇರಿ, ಪದ್ಮಾಜೀ ಜಿ.ಎಸ್., ಶಿವಶರಣ ಬಡದಾಳ, ಸುರೇಶ ಲೇಂಗಟಿ, ಸಿ.ಎಸ್. ಮಾಲಿಪಾಟೀಲ, ಸಂಜೀವ ಮಾಲೆ, ಬಾಬುರಾವ ಪಾಟೀಲ, ಜ್ಯೋತಿ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.