ಕಲಬುರಗಿ | ಡಿ.16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೋತ್ತಾಯ ಸಮಾವೇಶ : ದೀಪಕ್
ಕಲಬುರಗಿ: ಸುಪ್ರೀಂಕೋರ್ಟ್ ನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಾಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡಸಲಾಗುವುದು ಎಂದು ಮಾದಿಗ ಸಮಾಜದ ಮುಖಂಡ, ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಆ.1 ರಂದು ಸುಪ್ರೀಂಕೋರ್ಟ್ ನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ್ದು, ಬಿಟ್ಟರೆ ಏನನ್ನೂ ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ ಎಂದರು.
ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವುಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ. ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಮುಂದೆ ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ. 2011ರ ಜನಗಣತಿಯ ಅಂಕಿ ಅಂಶಗಳ ಅಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ರಾಜ್ಯ ನಾಯಕರು ಕರೆ ನೀಡಿದ್ದಾರೆ. ಬೆಳಗಾವಿ ಸಮಾವೇಶದ ಮೊದಲು ರಾಜ್ಯದ ಎಲ್ಲ ಶಾಸಕರ ಮನೆಯ ಮುಂದೆ ಡಿ.14 ರಂದು ತಮಟೆ ಚಳವಳಿ ನಡೆಸಿ ವಿಧಾನಸೌಧದಲ್ಲಿ ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ಆಗ್ರಹಿಸಲಾಗುವುದು ಎಂದಿದ್ದಾರೆ.
ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ನ ತೀರ್ಪು ಬಂದ ಮೊದಲ ವಾರದಲ್ಲೇ ಒಳಮೀಸಲಾತಿಯನ್ನು ಜಾರಿಮಾಡಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆಂದು ಹಸಿಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.