ಕಲಬುರಗಿ | ಒಳಮೀಸಲಾತಿ ಜಾರಿಗೆ ಮಾದಿಗ ಸಂಘಟನೆಗಳಿಂದ ಆಗ್ರಹ
ಅರೆಬೆತ್ತಲೆ ಮೆರವಣಿಗೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ
ಮಾದಿಗ ಸಮುದಾಯದ ವತಿಯಿಂದ ಪ್ರತಿಭಟನೆ
ಕಲಬುರಗಿ : ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಗರದಲ್ಲಿ ಮಾದಿಗ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅರೆಬೆತ್ತಲೆ ಮೆರವಣಿಗೆ ನಡೆಸಿದ ಮಾದಿಗ ಸಮುದಾಯದ ಮುಖಂಡರು, ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಅಸಮಾಧಾನ ಹೊರಹಾಕಿದರು.
ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ಹೊಣೆಯನ್ನು ರಾಜ್ಯ ಸರಕಾರಗಳಿಗೆ ನೀಡಿದ್ದು, ಕಾಂಗ್ರೆಸ್ ಸರಕಾರವು ಒಳಮೀಸಲಾತಿ ಜಾರಿ ಮಾಡದೆ, ಕಾಲಹರಣ ಮಾಡುತ್ತಿದೆ. ಕೆನೆಪದರು ನೆಪದಲ್ಲಿ ಮಾದಿಗ ಸಮುದಾಯಕ್ಕೆ ಬಹಳಷ್ಟು ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಶಾಮ್ ನಾಟೀಕರ್, ಪರಮೇಶ್ವರ್ ಖಾನಾಪೂರ, ಲಿಂಗರಾಜ್ ತಾರಫೈಲ್, ರಾಜು ವಾಡೇಕರ್, ದಶರಥ ಕಲಗುರ್ತಿ, ಗುರುರಾಜ್ ಭಂಡಾರಿ, ಗೋಪಾಲರಾವ್ ಕಟ್ಟಿಮನಿ ಚಿಂಚೋಳಿ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.