ಕಲಬುರಗಿ | ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ, ಕನಿಷ್ಠ ವೇತನ ನೀಡುವಂತೆ ಆಗ್ರಹ

ಕಲಬುರಗಿ: ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ನೀಡಬೇಕೆಂದು ಅಫಜಲಪುರ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ತಾಲೂಕು ಅಧ್ಯಕ್ಷ ಅಣ್ಣಾರಾಯ ಜಮಾದಾರ ಅವರ ನೇತೃತ್ವದಲ್ಲಿ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅಣ್ಣರಾಯ ಜಮಾದಾರ, 1978 ರಿಂದ ಕಂದಾಯ ಇಲಾಖೆಯಲ್ಲಿ 10,450 ಜನ ಗ್ರಾಮ ಸಹಾಯಕರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಗೌರವಧನ ವೇತನ 15,000 ರೂ. ಸಾವಿರ ಮಾತ್ರ ಸರಕಾರ ನೀಡುತ್ತಿದೆ. ಇಂದಿನ ದಿನಗಳಲ್ಲಿ ಜೀವನ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆ ಮಾಡಲು ತುಂಬಾ ಕಷ್ಟಕರವಾಗಿರುತ್ತದೆ. ಹಾಗಾಗಿ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಹಲವಾರು ಬಾರಿ ಮನವಿಪತ್ರ ಸಲ್ಲಿಸಿದರೂ ಸರ್ಕಾರವು ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯಾಗಲಿ ಮತ್ತು ಕನಿಷ್ಠ ವೇತನವಾಗಲಿ ನೀಡಿರುವುದಿಲ್ಲ ಎಂದು ತಮ್ಮ ನೋವು ವ್ಯಕ್ತಪಡಿಸಿದರು. ಹೀಗಾಗಿ ತಾವುಗಳು ನಮ್ಮ ಸಮಸ್ಯೆ ಗಮನ ಹರಿಸಿ ಬಡ ಗ್ರಾಮ ಸಹಾಯಕರು ಜೀವನ ನಿರ್ವಹಿಸಲು ಸೇವ ಭದ್ರತೆ ಹಾಗೂ ಕನಿಷ್ಠ ವೇತನ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಿ ಎಂದು ಸಂಘದ ವತಿಯಿಂದ ಮನವಿ ಮಾಡುತ್ತೇವೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ವೈ.ಪಾಟೀಲ್, ನಿಮ್ಮ ಬೇಡಿಕೆ ಸೂಕ್ತವಾಗಿದೆ, ನೀವೆಲ್ಲ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರ ಸೇವೆ ಮಾಡುತ್ತ ಅನೇಕ ವರ್ಷಗಳಿಂದ ಬರುತ್ತಿದ್ದಿರಿ, ಈ ನಿಮ್ಮ ಬೇಡಿಕೆ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವ ಕುಮಾರ್ ದಾಸರ್ , ಪುರಸಭೆ ಅಧ್ಯಕ್ಷೆ ಸುಹಾಸಿನಿ ಖೇಳಗಿ, ಕಂದಾಯ ಇಲಾಖೆ ಗ್ರಾಮ ಸಹಾಯಕ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಪುತ್ರ ಸಾಗರ್, ತಾಲೂಕು ಉಪಾಧ್ಯಕ್ಷ ಹೊನ್ನಪ್ಪ ಜಮಾದಾರ್, ಅಪ್ಪು ಜಮಾದಾರ್, ನಾಗಪ್ಪ ತಳವಾರ್, ಕಲ್ಲು ಪ್ಯಾಟಿ, ಸುರೇಶ್ ಜಮಾದಾರ್, ಹನುಮಾನ್ ಸಿಂಗ್, ಬಾಬು ಮದರಾ, ಸಂತೋಷ್ ಹಸಿರಗುಂಡಗಿ, ಕುಮಾರ್ ನಾಟಿಕರ್, ಖಾಜಪ್ಪ ಸಿಂಗೆ, ಸಿದ್ದರಾಮ ಕಲ್ಲೂರ್, ಸಂಜು ತಳವಾರ್, ನಾಗಮ್ಮ ಗುಡೂರ್, ಶರಣು ಹಿಂಚಿಗೇರಿ, ಸಚಿನ್ ಜೇವರಿಗೆ, ಶಿವರಾಯ ಅರ್ಜುನಗಿ, ಮಲ್ಕಪ್ಪ ಗೌಡ್ಗಾವ್, ಶಂಕರ್ ಲಿಂಗ ಕುಡುಗನೂರ್, ದತ್ತು ಮಣ್ಣೂರ್, ರಾಜಶೇಖರ್ ಗುಳನೂರ್, ದೇವೇಂದ್ರ ಗೌರ ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.