ಕಲಬುರಗಿ | ಕಡಗಂಚಿ ವಲಯದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ
ಕಲಬುರಗಿ : ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಹೊರವಲಯದ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನ ಸನ್ನಿಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಡಗಂಚಿ ಸುತ್ತಲಿನ 10 ಜನ ಕ್ಷಯರೋಗಿಗಳಿಗೆ 2ನೇ ಬಾರಿ ಉಚಿತ ಪೌಷ್ಟಿಕ ಆಹಾರವನ್ನು ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಗಮಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಸುಶೀಲ್ ಕುಮಾರ್ ಅಂಬರೆ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಿಸಿ ಮಾತನಾಡಿದ ಅವರು, ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನಿಂದ ತಾಲ್ಲೂಕಿನ ಬಡ ಜನರಿಗೆ ಪೌಷ್ಠಿಕ ಆಹಾರ ಪೂರೈಕೆ ಹಾಗೂ ಆರೋಗ್ಯ ತಪಾಸಣೆಯಂತ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ಕೆಲವು ದಿನಗಳ ಹಿಂದೆ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಂಡಿದ್ದು ಸಹ ಸ್ಮರಿಸಿದ ಅವರು, ಇಂದು ಕ್ಷಯರೋಗಿಗಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ದಿನಕ್ಕೊಂದು ಮೊಟ್ಟೆ, ಮಡಿಕೆಕಾಳು ಹೆಸರು ಕಾಳು ನೀಡಿ ಕ್ಷಯರೋಗಿಗಳಿಗೆ ತುಂಬಾ ಅನುಕೂಲ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಪೌಷ್ಟಿಕ ಆಹಾರ ವಿತರಣಾ ಸಮಯದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕರು ಫಾ.ದೀಪಕ್ ತೋಮಸ್, ಫಾ.ಪೌಸ್ತಿನ್, ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಫಾ.ವಿಲಿಯಂ ಮಿರಾಂದ, ಅಭಿಷೇಕ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.