ಕಲಬುರಗಿ | ಜಿಲ್ಲಾ ಕಸಾಪದಿಂದ ದಿನದರ್ಶಿಕೆ ಲೋಕಾರ್ಪಣೆ

ಕಲುಬುರಗಿ : ಕಳೆದ ಎರಡುವರೆ ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಪರ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಕೈಗೊಳ್ಳುತ್ತಿರುವುದಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರು ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಯುಗಾದಿಯ ಹೊಸ ವರುಷದ ಸಂದರ್ಭಕ್ಕಾಗಿ ಜಿಲ್ಲಾ ಕಸಾಪವು ಹೊರ ತಂದಿರುವ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು, ನೂರಾರು ಕಾರ್ಯಕ್ರಮಗಳ ಮೂಲಕ ಪರಿಷತ್ತನ್ನು ಎಲ್ಲರ ಮನೆ ಮಾತಾಗಿಸಿ ಜನಪ್ರಿಯಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕನ್ನಡಮಯ ಕಾರ್ಯಕ್ರಮ ಹಾಗೂ ಪ್ರಥಮ ರೀತಿಯ ಸಮ್ಮೇಳನಗಳನ್ನು ಆಯೋಜಿಸಿ ಹೊಸ ಸಾಂಸ್ಕೃತಿಕ ಪರಂಪರೆ ಹುಟ್ಟು ಹಾಕಿದ್ದಾರೆ ಎಂದು ಬಳೂಂಡಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರೇ ಪರಿಷತ್ತಿನ ಸದಸ್ಯರಾಗಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಅನೂನ್ಯತೆ ಭಾವ ಮತ್ತು ಸಹಕಾರದೊಂದಿಗೆ ಕೆಲಸ ಮಾಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಿಲ್ಲಾ ನೌಕರ ಸಂಘದ ಸದಸ್ಯರು ಪರಿಷತ್ತಿನ ಸದಸ್ಯರಾಗಿದ್ದು, ಇದೊಂದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ನೌಕರರ ಸಂಘದ ಸಹಕಾರದೊಂದಿಗೆ ಒಂದು ದಿನದ ಸರಕಾರಿ ನೌಕರರ ಸಾಹಿತ್ಯ ಸಮ್ಮೇಳನವೊಂದನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದರು.
ವೈದ್ಯರಾದ ಡಾ.ವೇಣುಗೋಪಾಲ ದೇಶಪಾಂಡೆ ಅವರು, ಸಮಾಜಮುಖಿ ಕಾರ್ಯಗಳಿಂದಲೇ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯ. ರಾಜ್ಯದಲ್ಲಿ ಮಾದರಿಯಾಗುವಂಥ ಕಾರ್ಯಗಳು ಜಿಲ್ಲಾ ಕಸಾಪದಿಂದ ನಡೆಯುತ್ತಿವೆ ಎಂದು ಹೇಳಿದರು.
ಸರಕಾರಿ ನೌಕರ ಸಂಘದ ರಾಜ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಧರ್ಮರಾಜ ಜವಳಿ, ಡಾ. ಜಯಸಿಂಗ ಜಾಧವ, ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಎಚ್.ಧನ್ನಿ, ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ, ಬಾಬುರಾವ್ ಪಾಟೀಲ್, ರಾಜೇಂದ್ರ ಮಾಡಬೂಳ ಮಾತನಾಡಿದರು.
ಪ್ರಮುಖರಾದ ಸೋಮಶೇಖರಯ್ಯ ಹೊಸಮಠ, ಬಸಯ್ಯಾ ಸ್ವಾಮಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಳಿಮಠ, ಎಂ.ಎನ್. ಸುಗಂಧಿ, ಚಂದ್ರಶೇಖರ ಮ್ಯಾಳಗಿ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.