ಕಲಬುರಗಿ | ಡಾ.ಶಿವಕುಮಾರ್ ಮಹಾಸ್ವಾಮಿಗಳು ಜನಮಾನಸದಲ್ಲಿ ಯಾವಾಗಲೂ ಜೀವಂತ : ಶಶೀಲ್ ನಮೋಶಿ

ಕಲಬುರಗಿ : ಸಿದ್ಧಗಂಗಾ ಮಠದ ಲಿಂಗೈಕ್ಯ ಪದ್ಮಭೂಷಣ ಡಾ.ಶಿವಕುಮಾರ್ ಮಹಾಸ್ವಾಮಿಗಳು ಈಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಆದರೆ ತ್ರಿವಿಧ ದಾಸೋಹದ ಮೂಲಕ ಇಂದಿಗೂ ಅವರು ಕರುನಾಡಿನ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಲಿಂಗೈಕ್ಯ ಡಾ.ಶಿವಕುಮಾರ್ ಮಹಾಸ್ವಾಮಿಗಳ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು.
ಇಂದು ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಕಲಿತ ಅದೆಷ್ಟೋ ಜನರು ವೈದ್ಯಕೀಯ, ಕೃಷಿ , ರಾಜಕೀಯ, ಸಿನೇಮಾ , ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು. ಇವತ್ತಿಗೂ ಅನ್ನಕ್ಕಾಗಿ ಸಿದ್ದ ಗಂಗೆಯಲ್ಲಿ ಶ್ರೀಗಳು ಹಚ್ಚಿದ ಒಲೆ ಉರಿಯುತ್ತಲೇ ಇದೆ. ಆಶ್ರಯಕ್ಕಾಗಿ ಅವರು ಅಡಿಗಲ್ಲಿಟ್ಟ ತಾಣ ಸೇವಾ ಸೌಧವಾಗಿ ಬೆಳೆಯುತ್ತಲೇ ಇದೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳು ಜ್ಞಾನ ಪಡೆಯಲೆಂದು ಶ್ರೀಗಳು ಉರಿಸಿದ ಜ್ಞಾನದ ದೀಪ ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ಜ್ಞಾನ ಪಡೆದವರು ದೇಶ ಮಾತ್ರವಲ್ಲದೆ, ವಿಶ್ವ ದೇಗುಲಕ್ಕೆ ಜ್ಞಾನವನ್ನು ಬೆಳಗುತ್ತಿದ್ದಾರೆ. ಶ್ರೀಗಳ ಜನ್ಮ ದಿನವಾದ ಇಂದು ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳೋಣ. ಅವರಂತೆ ನಿಸ್ವಾರ್ಥ ಬದುಕನ್ನು ಬದುಕಲು ಪ್ರಯತ್ನಿಸೋಣ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಕಾಲೇಜಿನ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಅರುಣಕುಮಾರ ಪಾಟೀಲ್, ಸಾಯಿನಾಥ ಪಾಟೀಲ್, ಅನಿಲಕುಮಾರ ಮರಗೋಳ, ನಿಶಾಂತ್ ಎಲಿ, ಡಾ.ಗುರು ಪಾಟೀಲ್, ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಸಂಜೋತ್ ಶಹಾ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಆರ್ ಪಾಟೀಲ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಎಲ್ಲ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.