ಕಲಬುರಗಿ | ಶಿಕ್ಷಣವು ಪ್ರತಿಯೊಬ್ಬ ಗ್ರಾಮೀಣ ವಿದ್ಯಾರ್ಥಿಯ ಹಕ್ಕು: ಡಾ.ಸೈಯದ್ ಸಮೀರ್
ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನ ಪಡೆಯುತ್ತಾ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು, ಶಿಕ್ಷಣವು ಪ್ರತಿಯೊಬ್ಬ ಗ್ರಾಮೀಣ ವಿದ್ಯಾರ್ಥಿಯ ಹಕ್ಕು ಎಂದು ಕೆ.ಎಸ್.ಸಿ.ಎಸ್.ಟಿ ಬೆಂಗಳೂರಿನ ಪ್ರಾದೇಶಿಕ ಯೋಜನಾ ಅಭಿಯಂತರ ಡಾ.ಸೈಯದ್ ಸಮೀರ್ ಹೇಳಿದರು.
ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ಮತ್ತು ಸರ್ಕಾರಿ ಪ್ರೌಢಶಾಲೆ, ಭಾತಂಬ್ರಾ, ಭಾಲ್ಕಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಗಣಿತ ದಿನ” ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿಭೆಗಳು ಅರಳುವುದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ಗಣಿತವನ್ನು ಟೆಕ್ನಾಲಜಿ ಬಳಸಿ ಕಲಿಯಬೇಕು, ಪ್ರಸ್ತುತ ಇಂಟರ್ನೆಟ್ ನಲ್ಲಿ ಲಭ್ಯವಿರುವ ಗಣಿತದ ಸಂಬಂಧಪಟ್ಟ ವಿವಿಧ ವೆಬ್ ಸೈಟ್ ಗಳು ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ವಿವಿಧ ಗಣಿತದ ಅಪ್ಲಿಕೇಶನ್ಗಳನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿಯ ಡೀನ್ ಮತ್ತು ಪ್ರಾಧ್ಯಾಪಕ ಡಾ.ರಾಜಶೇಖರ ಮಠಪತಿ, ಮನೋಹರ್ ಹೋಳ್ಕರ್, ಶಿಲ್ಪಜಯರಾಜ್ ಬೋರಾಳೆ, ಮುಖ್ಯಗುರುಗಳು ಖಲೀಲ್ ಅಹ್ಮದ್, ಮೊಹಮ್ಮದ್ ಲಯಕ್ ಅಲಿ, ಕೆ.ಎಸ್.ಸಿ. ಎಸ್.ಟಿ ಯ ಪ್ರಾಜೆಕ್ಟ್ ಅಸೋಸಿಯೇಟ್ ವಿಶ್ವ ಪ್ರಸನ್ನ, ಈಶ್ವರ್ ಹೂಗರ್ ಉಪಸ್ಥಿತರಿದ್ದರು.
ಚನ್ನವೀರಪ್ಪ ಚಕ್ರಸಾಲಿ ಮತ್ತು ಶಿಕ್ಷಕ ರಮೇಶ್ ಜೈನ್ ನಿರೂಪಿಸಿದರು. ಶಿಕ್ಷಕರಾದ ಸಂಜಯ್ ಹೆಡಗಾಪುರ, ಗೋಪಾಲ್ ಜಾಧವ್, ಶಕುಂತಲಾ ಬೆಣ್ಣೆ, ಪೂಜಾ ಕುಲಾಲಿ, ಸಮರಿನ್, ಶ್ರೀದೇವಿ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಗಣ್ಯರಿಗೆ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಗಣಿತ ವಿಷಯಕ್ಕೆ ಸಂಬಂಧಪಟ್ಟ ಪೋಸ್ಟರ್ ಪ್ರೆಸೆಂಟೇಶನ್ ಮತ್ತು ಮೊಡೆಲ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಮಾಣಪತ್ರ ವಿತರಣೆಯನ್ನು ಮಾಡಲಾಯಿತು.