ಕಲಬುರಗಿ: ಇಸ್ರೋದಲ್ಲಿ ಇಂಟರ್ನ್ ಶಿಪ್ ಗೆ ಶರಣಬಸವ ವಿವಿಯ ಎಂಟು ವಿದ್ಯಾರ್ಥಿಗಳು ಆಯ್ಕೆ
ಕಲಬುರಗಿ: ಬೆಂಗಳೂರಿನ ಇಸ್ರೋದ ಪ್ರತಿಷ್ಠಿತ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಶರಣಬಸವ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ (ಸಹ-ಶಿಕ್ಷಣ) ಎಂಟು ವಿದ್ಯಾರ್ಥಿಗಳು ಅಲ್ಪಾವಧಿಯ 45 ದಿನಗಳ ಇಂಟರ್ನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಚೇರ್ ಪರ್ಸನ್ ಡಾ.ಶಶಿಧರ ಸೊನ್ನದ, ಇದೇ ಪ್ರಥಮ ಬಾರಿಗೆ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ತಮ್ಮ ಇಂಜಿನಿಯರಿಂಗ್ ಕೋರ್ಸ್ ಅವಧಿಯಲ್ಲಿ ಇಸ್ರೋದಲ್ಲಿ ಇಂಟೆನ್ಸಿವ್ ಇಂಟರ್ನ್ ಶಿಪ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಏಳನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ರಕ್ಷಿತ್ ದೊಡ್ಡಮನಿ, ಶಿವಕುಮಾರ್ ಖ್ಯಾದಿ, ಸಿದ್ದಲಿಂಗ್ ಜಿ.ಎಂ., ವಿನಯ್ ಕುಮಾರ್, ಪ್ರಹ್ಲಾದ್ ಎಂ., ಅಂಕಿತ್ ಕೆ., ಅಚ್ಯುತ್ ಕುಲಕರ್ಣಿ, ಮತ್ತು ನಿರಂಜನ ಕಡೆಸೂರು ಇಂಟರ್ನ್ ಶಿಪ್ ಗೆ ಆಯ್ಕೆಯಾದವರು ಎಂದು ತಿಳಿಸಿದ್ದಾರೆ.
ಈ ಇಂಟರ್ನ್ ಶಿಪ್ 2025ರ ಜನವರಿ ಒಂದರಿಂದ ಬೆಂಗಳೂರಿನ ಯು.ಆರ್.ರಾವ್ ಸ್ಯಾಟ್ ಲೈಟ್ ಸೆಂಟರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ವಿದ್ಯಾರ್ಥಿಗಳು ಇಸ್ರೋದಲ್ಲಿ ನಡೆಯುತ್ತಿರುವ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂಟರ್ನ್ಶಿಪ್ ಕಾರ್ಯಕ್ರಮದ ಕೊನೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಇಸ್ರೋದಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.