ಕಲಬುರಗಿ | ಸರಕಾರಿ ಜಾಗ ಅತಿಕ್ರಮಣ : ತಿಂಗಳೊಳಗೆ ವಶಕ್ಕೆ ಪಡೆಯಲು ನ್ಯಾ.ಬಿ.ವೀರಪ್ಪ ಸೂಚನೆ
ಕಲಬುರಗಿ : ನಗರದ ಬಡೇಪೂರ ಪ್ರದೇಶದ 5.3 ಎಕರೆ ಪ್ರದೇಶದ ಸರಕಾರಿ ಜಮೀನು ಒತ್ತುವರಿಯಾಗಿದ್ದು, ಇದನ್ನು ಮುಂದಿನ ಒಂದು ತಿಂಗಳೊಳಗೆ ಪರಿಶೀಲಿಸಿ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ನ್ಯಾ.ಬಿ.ವೀರಪ್ಪ ಸೂಚನೆ ನೀಡಿದ್ದಾರೆ.
ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತು ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಲ್ಲಿ, ನಗರದ ನಿವಾಸಿ ಸುಭಾಷ್ಚಂದ್ರ ಎಲ್. ಅವರು ಬಡೇಪೂರ್ ಸರ್ವೇ ನಂಬರ್ 1 ರಲ್ಲಿ 5 ಎಕರೆ 3 ಗುಂಟೆ ಸರಕಾರಿ ಜಮೀನು ಅತಿಕ್ರಮಣಮಾಡಿದ್ದು, ಇದನ್ನು ಸರಕಾರ ವಶಕ್ಕೆ ಪಡೆಯಬೇಕೆಂಬ ದೂರು ಆಲಿಸಿದ ಉಪ ಲೋಕಾಯುಕ್ತರು ಜೆಸ್ಕಾಂ, ಲೋಕೋಪಯೋಗಿ, ಪಾಲಿಕೆಯ ವಲಯ ಆಯುಕ್ತರಿಗೆ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.
ಚಿಂಚೋಳಿ ತಾಲೂಕಿನ ಮುಕುಂದ ದೇಶಪಾಂಡೆ ಅವರು, ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ತಾವು ನಡೆಸುತ್ತಿದ್ದ ಪಡಿತರ ಅಂಗಡಿಯನ್ನು ಸಾರ್ವಜನಿಕರ ದೂರಿನ ಮೇಲೆ ಅಮಾನತ್ತು ಮಾಡಲಾಗಿತ್ತು. ತದನಂತರ ತನಿಖೆ ನಡೆಸಿ ಇಲಾಖೆಯವರು ಅಮಾನತ್ತು ಆದೇಶ ಹಿಂಪಡೆದಿದ್ದು, ಕಳೆದ 2 ತಿಂಗಳಿಂದ ಕೆ.ವೈ.ಸಿ. ಥಂಬ್ ಪಡೆಯಲು ಆಹಾರ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿಗಳ ಮುಂದೆ ತಮ್ಮ ದೂರು ಇಟ್ಟರು. ಇದನ್ನು ಆಲಿಸಿದ ನ್ಯಾ.ಬಿ.ವೀರಪ್ಪ ಅವರು ಒಂದು ವಾರದಲ್ಲಿ ಪ್ರಕರಣ ಇತ್ಯರ್ಥಪಡಿಸಿ ಎಂದು ಆಹಾರ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿ ಅರ್ಜಿ ವಿಲೇವಾರಿ ಮಾಡಿದರು.