ಕಲಬುರಗಿ | ಮಲ್ಲಾಬಾದ ಏತ ನೀರಾವರಿ ಧರಣಿ : ಹಲವು ರೈತರು ಪೊಲೀಸರ ವಶಕ್ಕೆ
ಕಲಬುರಗಿ : ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಕೆಲಸ ಕೂಡಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರೈತಪರ ಮತ್ತು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದಿದ್ದ ಧರಣಿಯು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿರುವ ಪ್ರತಿಭಟನೆಯು ರಾತ್ರಿಯಾದರೂ ಧರಣಿನಿರತರು ಜಾಗವನ್ನು ಬಿಟ್ಟು ಕದಲಲಿಲ್ಲ, ಈ ಕುರಿತಾಗಿ ತಾಲ್ಲೂಕು ಆಡಳಿತ ಮತ್ತಿತರ ಅಧಿಕಾರಿಗಳು ಕಾಮಗಾರಿ ಪುನರ ಆರಂಭ ಮಾಡುವ ಕುರಿತಾಗಿ ಭರವಸೆ ನೀಡಿದ್ದರೂ, ಪಟ್ಟು ಹಿಡಿದ ಹೋರಾಟಗಾರರು ಈ ಕೂಡಲೇ ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿ ಧರಣಿ ಮುಂದುವರಿಸಿದರು.
ರಾತ್ರಿಯಾದರೂ ಪ್ರತಿಭಟನೆ ನಿಲ್ಲಿಸದ ಮಲ್ಲಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿಯ ಸಂಚಾಲಕ, ಸಿಪಿಐ ಪಕ್ಷದ ಮುಖಂಡ ಮಹೇಶಕುಮಾರ್ ರಾಠೋಡ್, ಬಿಜೆಪಿ ಮುಖಂಡೆ ಶೋಭಾ ಬಾಣಿ, ಜೆಡಿಎಸ್ ನಾಯಕ ದೊಡ್ಡಪ್ಪಗೌಡ ಪಾಟೀಲ್, ಗುರುನಾಥ ಸಾಹು ರಾಜವಾಳ, ಮಲ್ಲಣಗೌಡ ಪಾಟಿಲ ಕೆಲ್ಲೂರ, ರಾಜಾ ಪಟೇಲ ಯಾಳವಾರ, ಶಾಂತಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಕೆಲ್ಲೂರ, ಇಬ್ರಾಹಿಂ ಪಟೇಲ್ ಯಾಳವಾರ, ಮಹಮ್ಮದ ಚೌದರಿ, ಬಿ.ಹೆಚ್.ಮಾಲೀಪಾಟಲ್, ದಸ್ತಗಿರ ಸಾಬ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು ಸುಗಮಗೊಳಿಸಲಾಯಿತು ಎಂದು ತಿಳಿದುಬಂದಿದೆ.