ಕಲಬುರಗಿ | ಯತ್ನಾಳ್ ಉಚ್ಚಾಟನೆ ಖಂಡಿಸಿ ಅಭಿಮಾನಿಗಳಿಂದ ಪ್ರತಿಭಟನೆ

ಕಲಬುರಗಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ ಹಿನ್ನಲೆ ನಗರದಲ್ಲಿ ಮಂಗಳವಾರ ಯತ್ನಾಳ್ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿ, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಯತ್ನಾಳ್ ಪರ ಘೋಷಣೆ ಕೂಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು. ಈ ವೇಳೆ ಟೈಯರಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರ ಮಾತನಾಡಿ, ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವದರಿಂದ ಹಿಂದೂ ಕಾರ್ಯಕರ್ತರಿಗೆ ನೋವು ಆಗಿದೆ. ಯತ್ನಾಳ್ ಅವರಿಗೆ ಮತ್ತೇ ಪಕ್ಷದಲ್ಲಿ ಸೇಪರ್ಡೆ ಮಾಡಿಕೊಳ್ಳಬೇಕು. ಪಕ್ಷದಲ್ಲಿ ಏನಾದರೂ ಸಮಸ್ಯೆಗಳು ಇದ್ದಾರೆ ಕುಳಿತುಕೊಂಡು ಬಗೆ ಹರಿಸಿಕೊಳ್ಳಬೇಕು ಎಂದರು.
ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಯಕುಮಾರ ನಂದ್ಯಾಳ, ಸಂಗಮೇಶ ನಂದ್ಯಾಳ, ಚಂದ್ರಕಾಂತ ಕಾಳಗಿ, ಮಾಲಾಶ್ರೀ ಕಣ್ಣಿ, ಶರಣಬಸಯ್ಯ ಹಿರೇಮಠ,ಮಹೇಶ್ ಗೊಬ್ಬುರ. ಮನೋಜ್ ಚೌದ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.