ಕಲಬುರಗಿ | ಚಿಂಚೋಳಿ ಕಾರ್ಖಾನೆ ಪ್ರಾರಂಭಿಸುವಂತೆ ರೈತರ ಆಗ್ರಹ
ಕಲಬುರಗಿ : ಚಿಂಚೋಳಿ ಸಿದ್ದಶ್ರೀ ಎಥೆನಾಲ್ ಕಾರ್ಖಾನೆಯು ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ರೈತರು, ಕಾಳಗಿ ಬಜಾರ್ ಬಸವೇಶ್ವರ ಮೂರ್ತಿಯಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಎತ್ತಿನಗಾಡಿ, ಟ್ರ್ಯಾಕ್ಟರ್ ಗಳೊಂದಿಗೆ ಬೃಹತ್ ಮೆರವಣಿಗೆ ಮೂಲಕ ಅಂಬೇಡ್ಕರ್ ಸರ್ಕಲ್ ನಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದಶ್ರೀ ಎಥೆನಾಲ್ ಕಾರ್ಖಾನೆ ಬಂದ್ ಮಾಡಿದ್ದರಿಂದ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ ಕಬ್ಬು ಬೆಳೆದ ರೈತರಿಗೆ ಕಬ್ಬು ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದಂತಾಗಿದೆ. ಕಬ್ಬು ಕಟಾವು ಮಾಡಲು ಜಿಲ್ಲಾಧಿಕಾರಿಯವರು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಜಿಲ್ಲೆಯಲ್ಲಿ ಕೂತಿದ್ದಾರೆ. ಆದರೆ ರೈತರು ಕಬ್ಬು ಕಟಾವು ಮಾಡುವ ಕಂಪನಿಯವರ ದಾರಿ ಕಾಯುತ್ತಾ ಬೇಸತ್ತಿದ್ದಾರೆ. ಎರಡು ತಿಂಗಳಾದರೂ ಯಾವ ಕಾರ್ಖಾನೆಯವರು ಬಂದಿಲ್ಲ. ಕಂಪನಿಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಜಿಲ್ಲಾಧಿಕಾರಿಯವರು ರೈತರ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಈಗಾಗಲೇ 13 ತಿಂಗಳಾದರು ಕಬ್ಬು ಕಟಾವು ಮಾಡುತ್ತಿಲ್ಲ, ಕಬ್ಬು ಒಣಗುವ ಪರಿಸ್ಥಿತಿ ಎದುರಾಗಿದೆ. ತಕ್ಷಣವೇ ಸರಿಯಾದ ಸಮಯಕ್ಕೆ ರೈತರ ಕಬ್ಬು ಕಟಾವು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮತ್ತು ಕಾಳಗಿ ತಾಲ್ಲೂಕು ಸಮಿತಿ ಮುಖಂಡರು ಮನವಿ ಪತ್ರ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರಣ್ಣಾ ಗಂಗಾಣಿ, ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ದ ಶಿವಾಚಾರ್ಯರು ರಟಕಲ್ ಮಠ, ಮಂಗಲಗಿ ಶ್ರೀಗಳು, ಕೊಲ್ಡಿ ಶ್ರೀಗಳು, ಆರ್.ಆರ್ ಪಾಟೀಲ್ ಪಸ್ತಪುರ, ರಾಜಶೇಖರ ಗುಡುದಾ ರಟಕಲ್, ಜಗದೀಶ್ ಪಾಟೀಲ್ ಕಾಳಗಿ, ವಿಜಯ್ ಕುಮಾರ ಚೆಂಗಟಾ ಹೊಸಳ್ಳಿ, ವೀರಭದ್ರಪ್ಪ ಸಿರಂಜಿ ಚಂದನಕೇರಾ, ಶಿವರಾಜ್ ಪಾಟೀಲ್ ಗೋಣಗಿ, ಮಲ್ಲು ಕೊಡುದೂರು ರುದ್ನೂರ್, ಸಿದ್ದರಾಮ್ ಪಾಟೀಲ್ ಮಂಗಲಗಿ, ಪ್ರಶಾಂತ್ ರಾಜಾಪುರ್ ಕೊಡದುರ, ರಾಜು ತಳವಾರ್ ಹೊಸಳ್ಳಿ, ವಿಠ್ಠಲ್ ಸನಾದಿ ಹೊಲಸುಗೂಡ, ಮಲ್ಲಿಕಾರ್ಜುನ್ ಪಾಟೀಲ್ ಹಲಚೆರಾ ಸೇರಿದಂತೆ ಹಲವರು ಇದ್ದರು.