ಕಲಬುರಗಿ | ಬಾಲಕಿ ಆತ್ಮಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆಗೆ ಮುಸ್ಲಿಂ ಮುಖಂಡರಿಂದ ಆಗ್ರಹ
ಕಲಬುರಗಿ : ಜೇವರ್ಗಿಯಲ್ಲಿ ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಾರೇ ಆಗಿರಲಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜೇವರ್ಗಿ ತಾಲ್ಲೂಕಿನ ಮುಸ್ಲಿಂ ಸಮುದಾಯದ ಮುಖಂಡರು, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ, ಇಂಥಹ ಘಟನೆಯನ್ನು ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಖಂಡಿಸುತ್ತದೆ, ಆರೋಪಿಯ ಅಮಾನವೀಯ ಕೃತ್ಯಕ್ಕೆ ನಮ್ಮ ಧಿಕ್ಕಾರವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯೊಬ್ಬನ ಬಂಧನ ಮಾಡಲಾಗಿದೆ. ಸದರಿ ಘಟನೆ ಕೂಲಂಕುಷವಾಗಿ ತನಿಖೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತ ಘಟನೆಗೆ ಕಡಿವಾಣ ಹಾಕಬೇಕು. ಇಂತಹ ಘಟನೆಗಳಿಗೆ ನೆಪ ಮಾಡಿ ಒಂದು ಸಮುದಾಯಕ್ಕೆ ನಿಂದಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮೃತ ಬಾಲಕಿ ಮಹಾಲಕ್ಷ್ಮಿ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ಸರಕಾರ ಕೊಡಬೇಕು. ಸಾವಿಗೆ ಕಾರಣನಾದ ಆರೋಪಿ ಯಾವುದೇ ಧರ್ಮದವರು ಇದ್ದರೂ ಕೂಡ ಅವನನ್ನು ಮುಲಾಜಿಲ್ಲದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ವ್ಯಕ್ತಿ ಅಪರಾಧ ಮಾಡಿದರೆ ಅದಕ್ಕೆ ಆ ವ್ಯಕ್ತಿಯೇ ನೇರ ಅಪರಾಧಿ, ಅದಕ್ಕೆ ಅವನ ಧರ್ಮ ಕಾರಣವಲ್ಲ ಎಂದು ಮುಖಂಡರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ ಜೇವರ್ಗಿ ತಾಲ್ಲೂಕು ಅಧ್ಯಕ್ಷರಾದ ಮೊಹಿಯುದ್ದೀನ್ ಇನಾಮದಾರ್, ರೌಫ್ ಸಾಬ್ ಹವಾಲ್ದಾರ್, ರಹೇಮಾನ್ ಪೇಟ್, ಅಲ್ಲಾ ಬಕ್ಷ್ ಸೇಟ್ ಬಗ್ಬಾನ್, ಬಶೀರ್ ಸಾಬ್ ಇನಾಮದಾರ್, ಮಜೀದ್ ಸೇಟ್ ಗಿರ್ನಿ, ಮೊಹಸಿನ್ ಜಾಗೀರದಾರ್, ಮಹೆಬೂಬ್ ಪಟೇಲ್ ಕುಬಾಲ್, ಸೋಫಿ ಸಾಬ್ ಗನ್ವಾರ್, ಇಬ್ರಾಹಿಂ ಸೇಟ್ ಮಿರ್ಚಿ, ನಿಸಾರ್ ಇನಾಮದಾರ್, ಕೆ. ಪಾಶಾ ಸಾಬ್, ಮಹೆಬೂಬ್ ಸಾಬ್ ಶಾನ್ ವಾಲೆ, ರಜಾಕ್ ಪಟೇಲ್ ಸಾಬ್, ಶೇಕ್ ಸದ್ದಾಂ, ಅಮೀರ ಸಾಬ್ ಜಮಾದಾರ, ಮಹೆಬೂಬ್ ಸಾಬ್ ಕೆಂಬಾವಿ, ಬಾಷಾ ಪೇಟ್ ಸೇರಿದಂತೆ ಹಲವರು ಇದ್ದರು.