ಕಲಬುರಗಿ | ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ವಿಷಾದನೀಯ : ಮರೆಪ್ಪ ಹಳ್ಳಿ
ಕಲಬುರಗಿ : ಕನ್ನಡ ನಾಡು, ನುಡಿ ವಿಶ್ವದಲ್ಲಿಯೇ ಅತ್ಯಂತ ಉತ್ತಮ ಸಂಸ್ಕೃತಿ ಹೊಂದಿದ್ದರೂ, ನಾವಿಂದೂ ಆಂಗ್ಲ ಭಾಷೆಯ ಪ್ರಭಾವಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದ್ದಾರೆ.
ರವಿವಾರ ಶಹಾಬಾದ್ ನಗರದ ಸಹರಾ ಫಂಕ್ಷನ್ ಸಭಾಂಗಣದಲ್ಲಿ ಕರವೇ ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷ್ ನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಅಪ್ಪ-ಅಮ್ಮ ಸಂಸ್ಕೃತಿಗೆ ವಿಮುಖರಾಗಿ ಮಮ್ಮಿ-ಡ್ಯಾಡಿ ಸಂಸ್ಕೃತಿಗೆ ಒಳಗಾಗುತ್ತಿದ್ದೆವೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾರ್ವಜನಿಕರು ನಗುವಿನಲ್ಲೇ ತೇಲಿ ಹೋದರು. ತೊನಸನಹಳ್ಳಿ(ಎಸ್) ಗ್ರಾಮದ ಮಲ್ಲಣಪ್ಪ ಮಹಾಸ್ವಾಮೀಜಿ, ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ, ಉದ್ಯಮಿ ನರೇಂದ್ರ ವರ್ಮಾ, ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ್, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ದೊಡ್ಡಪ್ಪ ಹೊಸಮನಿ, ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ಅಪ್ಪುಗೌಡ ತರನಳ್ಳಿ, ಜಹೀರ್ ಅಹ್ಮದ್ ಪಟವೇಗರ್ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.
ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಳಕರ್ ಪ್ರಾಸ್ತಾವಿಕ ನುಡಿದರು. ಮರಲಿಂಗ ಯಾದಗಿರಿ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕರವೇ ನಗರ ಅಧ್ಯಕ್ಷ ಸೇರಿದಂತೆ ತಾಲ್ಲೂಕು, ನಗರ ಮತ್ತು ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಶಸ್ತಿ ಪ್ರದಾನ :
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಪ್ರಮೋದ ನಾಟೀಕಾರ, ಮರಲಿಂಗ ಯಾದಗಿರಿ, ಹುಸೇನ್ ಪಾಷಾ, ಶಿಕ್ಷಕ ನಜೀರ್ ಅಹ್ಮದ್, ಮರೆಯಪ್ಪ ಭಜಂತ್ರಿ, ಕು.ಕುಸಮಾ.ಬಿ.ಮಯೂರ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.