ಕಲಬುರಗಿ | ಬಗರ್ ಹುಕುಂ ಹಕ್ಕುಪತ್ರ ; ನ.25ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ : ಮಹೇಶ್ ಎಸ್.ಬಿ
ಕಲಬುರಗಿ : ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಇದೇ ನ.25ರಿಂದ ಜಿಲ್ಲಾ ಮಟ್ಟದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ. ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 70-80 ವರ್ಷಗಳಿಂದ ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲಾ ಸರಕಾರಗಳಿಗೂ ಈ ಬಡ ರೈತರ ಜೀವನದ ವಸ್ತು ಸ್ಥಿತಿಯ ಅರಿವಿದ್ದೇ ಸರಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ. ಆದರೂ ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರು ಸಾಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿ ಒಳಗಾಗಿದ್ದಾರೆ ಎಂದರು.
ಸಾಗುವಳಿದಾರರು ಬಹುತೇಕ ಅನಕ್ಷರಸ್ಥರಾಗಿದ್ದು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಸಹಜವಾಗಿ ಇವರಿಗೆ ಕೃಷಿ ಬೆಳೆ ಸಾಲ. ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಸಾಲವು ದೊರೆಯದ ಕಾರಣ ಬಹುತೇಕ ಬಡ ರೈತ ಕೃಷಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ಕೈ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ. ಕೆಲವೊಮ್ಮೆ ಇಂತಹ ಪರಿಸ್ಥಿತಿಯು ಅವರನ್ನು ಆತ್ಮಹತ್ಯೆಯಂತಹ ದಾರುಣ ಕೃತ್ಯಕ್ಕೆ ಮೊರೆ ಹೋಗುವಂತೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಹೀಗಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ನಾಯಕರಾದ ಭಾಗಣ್ಣಾ ಬುಕ್ಕಾ, ಮಲ್ಲಿಕಾರ್ಜುನ ಬೈಂಡ್ಲರ್, ರವೀಂದ್ರ ಭೀಮಹಳ್ಳಿ ಸೇರಿದಂತೆ ಇತರರು ಇದರು.