ಕಲಬುರಗಿ | ಅಂಬೇಡ್ಕರ್ ಕುರಿತು ಅವಹೇಳನ : ಶಾಸಕ ಶರಣು ಸಲಗರ್ ಪತ್ನಿ ಸಹಿತ ಇಬ್ಬರ ಬಂಧನಕ್ಕೆ ಆಗ್ರಹ
ಕಲಬುರಗಿ: ಮೊಬೈಲ್ ಸಂಭಾಷಣೆಯೊಂದರಲ್ಲಿ ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಮಹಾನಗರ ಪಾಲಿಕೆಯ ಕಚೇರಿ ವ್ಯವಸ್ಥಾಪಕ ಅಂಬಾದಾಸ್ ಖತಲ್ ಹಾಗೂ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಅವರ ಪತ್ನಿ ಸಾವಿತ್ರಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು.
ಈ ಆಡಿಯೊ ವೈರಲ್ ಆಗುತ್ತಿದಂತೆ ಕಲಬುರಗಿ ಮಹಾನಗರ ಪಾಲಿಕೆ ಆವರಣಕ್ಕೆ ದಲಿತ ಸೇನೆಯ ರಾಜ್ಯಧ್ಯಕ್ಷರಾದ ಹನುಮಂತ ಜಿ. ಯಳಸಂಗಿಯವರ ನೇತೃತ್ವದಲ್ಲಿ ಸಮೀರ್ ಅವುಟಿಯವರು ಪಾಲಿಕೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣು ಅತನೂರ್, ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಭೋವಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹನುಮಂತ ಯಳಸಂಗಿ, ಅರುಣ್ ಕುಮಾರ್ ಸುತಾರ್, ಪ್ರದೀಪ್ ಬೋರಾಳಕರ್, ಅನಿಲ್ ಕುಮಾರ್ ಚಕ್ರ, ಅರುಣ್ ಕುಮಾರ್ ಕೋಟೆ, ಲೋಕೇಶ್ ಹಾದಿಮನಿ, ಕಮಲ್ ಕುಸನೂರ್, ದೇವೆಂದ್ರ ಯಳಸಂಗಿ, ಅಜಯಸಿಂಗ್, ರವಿಕುಮಾರ್ ಸಿಂಧೆ, ಅಶೋಕ್ ಡಾಂಗೆ, ಪ್ರೇಮ್ ಸೀಲ್ಡ್, ಡೆಕ್ಕನ್, ಶ್ರಾವಣ್ ದರ್ಗಿ, ತಿಮ್ಮಣ್ಣ, ಶರಣಗೌಡ ಚಿದಂಬರಂ, ಪ್ರಸನ್ನ, ರವಿಕುಮಾರ್, ವಿಶ್ವರಾಧ್ಯ, ಆನಂದ್, ಶಿವಯೋಗೆಪ್ಪ ಕಿವಡೆ, ಅನಿಲ್ ಕುಮಾರ್ ಚಾಂಬಳ್, ಮುಕ್ರಂ ಜಾನ್, ಮಹೇಶ್, ರವಿ ಚಲವಾದಿ ಮುಂತಾದವರು ಪಾಲ್ಗೊಂಡಿದ್ದರು.
ಧರಣಿ ನಿರತರುಬಳಿಕ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಳೆದ 19ರಂದು ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳಾದ ಅಂಬಾದಾಸ್ ಖತಲ್ ಮತ್ತು ಶಾಸಕ ಶರಣು ಸಲಗರ್ ಪತ್ನಿ ಸಾವಿತ್ರಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿದರು.