ಕಲಬುರಗಿ | ನಾಳೆಯಿಂದ ಅಂತರ್ರಾಷ್ಟ್ರೀಯ ಟೆನಿಸ್ ಪುರುಷರ ಟೂರ್ನಿ
ಕಲಬುರಗಿ : ಅಂತರ್ರಾಷ್ಟ್ರೀಯ ಟೆನಿಸ್ ಟೂರ್ನಿ (ಐಟಿಎಫ್) ಪಂದ್ಯಾವಳಿ ನಾಳೆಯಿಂದ(17ರಿಂದ) 24ರವರೆಗೆ ಕಲಬುರಗಿಯಲ್ಲಿ ಎರಡನೇ ಬಾರಿ ಆತಿಥ್ಯದಲ್ಲಿ ನಡೆಯಲಿದ್ದು, 8 ರಾಷ್ಟ್ರಗಳ 15 ವಿದೇಶಿ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ರಾಜ್ಯ ಲಾನ್ಟೆನ್ನಿಸ್ ಸಂಸ್ಥೆ ಆಶ್ರಯದಲ್ಲಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಟೂರ್ನಿ ಆಯೋಜಿಸಲಾಗಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಬರದಿಂದ ಸಾಗಿವೆ. ವಿವಿಧ ಇಲಾಖೆಯ ಅಧಿಕಾರಿಗಳು ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ. ನಾಲ್ವರು ಕನ್ನಡಿಗರು ಸೇರಿ 75 ದೇಶಿಯ, ವಿದೇಶಿ ಪ್ರತಿಭಾನ್ವಿತ ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ ನಾಲ್ವರು ಕ್ರೀಡಾಪಟುಗಳು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆಯುವುದು ಸೇರಿ ಒಟ್ಟು 20 ಆಟಗಾರರು ಮುಖ್ಯ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. 8 ಆಟಗಾರರು ಎರಡು ಸುತ್ತಿನ ಅರ್ಹತಾ ಪಂದ್ಯಗಳ ನಂತರ ಪ್ರವೇಶ ಪಡೆಯಲಿದ್ದಾರೆ ಎಂದು ವಿವರಿಸಿದರು.
ನ.18 ರಂದು ಮಧ್ಯಾಹ್ನ 3 ಗಂಟೆಗೆ ಆಟಗಾರರ ಡ್ರಾ ನಡೆಯಲಿದ್ದು, ನ.19 ರಂದು ಬೆಳಗ್ಗೆ 8.30 ಗಂಟೆಗೆ ಉದ್ಘಾಟನಾ ಪಂದ್ಯಾವಳಿ ಜರುಗಲಿದೆ. ನ.23 ರಂದು ಸ್ಪರ್ಧಾ ವಿಜೇತರಿಗೆ ಡಬಲ್ಸ್ ಬಹುಮಾನ ವಿತರಿಸಲಾಗುವುದು. ನ.24 ರಂದು ಮಧ್ಯಾಹ್ನ 12.30 ಗಂಟೆಗೆ ಸಿಂಗಲ್ಸ್ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. 25,000 ಡಾಲರ್ (ಅಂದಾಜು 23 ಲಕ್ಷ ರೂ.) ಬಹುಮಾನ ವಿತರಿಸಲಾಗುವುದು. ವಿಜೇತ ಕ್ರೀಡಾಪಟು 25 ರ್ಯಾಕಿಂಗ್ ಅಂಕಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಆಯೋಜನಾ ಸಮಿತಿ ಸದಸ್ಯರಾದ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಅಬ್ದುಲ್ ಅಝೀಂ, ಕರ್ನಾಟಕದ ವೃತ್ತಿ ಪರ ಟೆನಿಸ್ ಆಟಗಾರ ಪೀಟರ್ ವಿಜಯಕುಮಾರ, ಕ್ರೀಡಾ ಇಲಾಖೆಯ ಸಹಾಯಕ ಆಯುಕ್ತರು ಮತ್ತಿತರರಿದ್ದರು.