ಕಲಬುರಗಿ | ಅಕ್ರಮ ಮರಳುಗಾರಿಕೆ ಸ್ಥಳ ವೀಕ್ಷಣೆಗೆ ಬಂದ ವಿಜಯೇಂದ್ರಗೆ ಧಿಕ್ಕಾರ ಕೂಗಿದ 'ಕೈ' ಕಾರ್ಯಕರ್ತರು

ಕಲಬುರಗಿ : ಚಿತ್ತಾಪುರ ತಾಲೂಕಿನ ಬಾಗೋಡಿ, ಬೆಳಗುಂಪಿಯಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಮರಳುಗಾರಿಕೆಯ ಸ್ಥಳದ ವೀಕ್ಷಣೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಮರಳುಗಾರಿಕೆಯ ಸ್ಥಳದ ವೀಕ್ಷಣೆಗೆ ಸ್ಥಳೀಯ ಮುಖಂಡರೊಂದಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಚಿತ್ತಾಪುರದ ಬಾಗೋಡಿ ಗ್ರಾಮಕ್ಕೆ ಬಂದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ವೇಳೆ ಮುಜುಗರಕ್ಕೆ ಒಳಗಾದ ವಿಜಯೇಂದ್ರ ವಾಪಸ್ ಕಲಬುರಗಿಯತ್ತ ಸಾಗಿದ್ದಾರೆ.
ಕಳೆದ ಸುಮಾರು ದಿನಗಳಿಂದ ಅನಧಿಕೃತವಾಗಿ ಸಾವಿರಾರು ಟಿಪ್ಪರ್‌ಗಳ ಮೂಲಕ ಮರಳು ಸಾಗಾಣಿಕೆ ಮಾಡುತ್ತಿದ್ದು, ಜಿಲ್ಲಾಡಳಿತ ಹಾಗೂ ಮೈನಿಂಗ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ. ಕಲಬುರಗಿಯಾದ್ಯಂತ ಅಕ್ರಮ ಮರಳು ದಂಧೆ ಜೊತೆ ಜೊತೆಗೆ ಗೂಂಡಾ ರಾಜ್ ನಡೆಯುತ್ತಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ವೇಳೆ ಆರೋಪಿಸಿದ್ದಾರೆ.
ಈ ಸಂದರ್ಭಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕರಾದ ಬಸವರಾಜ ಮತ್ತಿಮಡು, ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಇದ್ದರು.