ಕಲಬುರಗಿ | ವಾಡಿಯಲ್ಲಿ ಕನಕದಾಸ ಜಯಂತಿ ಆಚರಣೆ
ಕಲಬುರಗಿ: ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದಾಸ ಶ್ರೇಷ್ಠ ಕನದಾಸರ ಜಯಂತಿ ಅಂಗವಾಗಿ ಮುಖಂಡರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಜಾತಿ, ಮತ, ವರ್ಗ ವರ್ಣ ತಾರತಮ್ಯಗಳ ಅಸಮಾನತೆಯನ್ನು ತೊಡೆದುಹಾಕಲು ಕಲ್ಯಾಣ ಕ್ರಾಂತಿಯ ಮೂಲಕ ಹೆದ್ದಾರಿಯನ್ನು ನಿರ್ಮಿಸಿದ ಬಸವಣ್ಣನವರ ಹೋರಾಟವನ್ನು ಮುಂದುವರೆಸುವ ಪ್ರತಿನಿಧಿಯಾಗಿ ಕನಕದಾಸರು ನಮಗೆ ಕಾಣುತ್ತಾರೆ ಎಂದು ಹೇಳಿದರು.
ಇವನಾರವ ಇವನಾರವ ಎಂದು ಕೇಳುವ ಕೂಪಮಂಡೂಕದ ಅಜ್ಞಾನಕ್ಕಿಂತ, ವಸುದೈವ ಕುಟುಂಬದೊಳಗೆ ಒಂದಾಗಿ ಸರ್ವರಿಗೂ ಸಮಬಾಳು ಸಮಭಾವ, ಭ್ರಾತೃತ್ವದ ಸಾಮರಸದ ಬದುಕು ನಮ್ಮದಾಗಬೇಕು ಎಂಬುದು ಕನಕದಾಸರ ಪರಮೋದ್ಧೇಶವಾಗಿತ್ತು ಎಂದರು.
ಕನಕದಾಸರ ಸರ್ವ ಸಮಾನತೆ, ಸರ್ವ ಸಮಭಾವದ ಸಮಾಜ ನಿರ್ಮಾಣದ ದೃಷ್ಟಿ ವಿಶಾಲವೂ ವಿಶಿಷ್ಟವೂ ಆಗಿದೆ. ಜಾತಿ, ವರ್ಗ, ವರ್ಣ, ಮತ, ಕುಲ, ಪಂಗಡಗಳ ತಾರತಮ್ಯದ ಬೇಗೆಯಲ್ಲಿ ಸ್ವತಃ ಬೆಂದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ ಕುಲರಹಿತವಾದ ಸಮಾನತೆಯ ಸಮಾಜವನ್ನು ನಿರ್ಮಿಸುವ ಪಣ ತೊಟ್ಟಿದ್ದರು ಎಂದು ಹೇಳಿದರು.
ವೀರಣ್ಣ ಯಾರಿ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳುಗಳ ಭೇದವಿಲ್ಲದೇ ಜಗತ್ತಿನ ಎಲ್ಲಾ ವ್ಯಕ್ತಿಗಳು ಸಮಾನರು ಎಂಬುದನ್ನು ತಮ್ಮ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಗಳ ಮೂಲಕ ಹಾಗೂ ಕಾವ್ಯಗಳಲ್ಲಿನ ಸಂದೇಶದ ಮೂಲಕ ತಿಳಿಸಿರುವ ಕನಕದಾಸರು, ದೇವರು ಯಾವಾಗಲೂ ಬಡವರ ಪರ ಎಂಬುದನ್ನು ರಾಮ ಧ್ಯಾನ ಚರಿತೆ ಮೂಲಕ ತಿಳಿಸಿದರು. ವ್ಯಕ್ತಿಯು ತನ್ನ ಗುರಿ ತಲುಪುವುದು ಮುಖ್ಯವಲ್ಲ ,ಅದನ್ನು ತಲುಪಲು ಬಳಸುವ ದಾರಿ ಉತ್ತಮವಾಗಿರಬೇಕಿರುತ್ತದೆ, ಅಂತಹ ಉತ್ತಮ ದಾರಿಯಲ್ಲಿ ನಡೆಯಲು ಕನಕದಾಸರ ಸಂದೇಶಗಳು ದಾರಿದೀಪವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ರಾಮಚಂದ್ರ ರಡ್ಡಿ, ಸಿದ್ದಣ್ಣ ಕಲ್ಲಶೆಟ್ಟಿ, ರಮೇಶ ಕಾರಬಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಪ್ರಮೋದ್ ಚೊಪಡೆ, ತುಕಾರಾಮ ರಾಠೋಡ, ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ, ಮಲ್ಲಿಕಾರ್ಜುನ ಸಾತಖೇಡ, ಬಸವರಾಜ ಕಿರಣಗಿ, ಸಿದ್ದು ಪುಜಾರಿ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಉಮಾಬಾಯಿ ಗೌಳಿ, ನಾಗರಾಜ ಪುಜಾರಿ, ಶಿವಕುಮಾರ ಪುಜಾರಿ, ಮಲ್ಲಿಕಾರ್ಜುನ ಪುಜಾರಿ, ಮೌನೇಶ ಪುಜಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ ಮತ್ತಿತರರು ಉಪಸ್ಥಿತರಿದರು.