ಕಲಬುರಗಿ | ಕವಿಗಳಾದವರಿಗೆ ಸದಾ ಅಧ್ಯಯನಶೀಲ ಅಗತ್ಯ : ಕೇದಾರಲಿಂಗಯ್ಯ ಹಿರೇಮಠ
ಕಲಬುರಗಿ : ಕವಿಗಳಾದವರು ಸದಾ ಅಧ್ಯಯನಶೀಲರಾಗುವುದು ಅಗತ್ಯ. ಹಿರಿಯ ಸಾಹಿತಿಗಳ ಕೃತಿಗಳನ್ನು ಓದುವ ರೂಢಿ ಹಾಕಿಕೊಳ್ಳಬೇಕು. ಅಂದಾಗ ಮಾತ್ರ ಒಬ್ಬ ಬರಹಗಾರ ಗಟ್ಟಿಯಾಗಿ ನಿಲ್ಲಬಹುದು ಎಂದು ರೈತ ಹೋರಾಟಗಾರರೂ ಆದ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕೇದಾರಲಿಂಗಯ್ಯ ಹಿರೇಮಠ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಆಯೋಜಿಸಿದ್ದ ಕವಯತ್ರಿಯ ಬಸಮ್ಮ ಸಜ್ಜನ್ ಅವರ 'ನೆನಪಿನ ಅಲೆಗಳು' ಹಾಗೂ ಶ್ರೀದೇವಿ ಪೊಲೀಸ್ ಪಾಟೀಲ ಅವರ 'ಮುಗಿಲಾಚೆ' ಚೊಚ್ಚಲ ಕೃತಿಗಳ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ ಮಾತನಾಡಿ, ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ. ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ಧ ಭಂಡಾರ ಅಗತ್ಯ. ಕಾವ್ಯದ ಸ್ವರೂಪ ಈಗ ಬದಲಾಗಿದೆ. ವಚನಕಾರರ ಆಶಯದಂತೆ ಆನು ಒಲಿದಂತೆ ಹಾಡುವುದು ಕೂಡ ಕಾವ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕವಿ, ಸಾಹಿತಿಗಳಿಗೆ ಸಾಮಾಜಿಕ ಬದಲಾವಣೆಯಲ್ಲಿ ಬಹುದೊಡ್ಡ ಜವಾಬ್ದಾರಿಯಿದೆ. ಸಮಾಜದ ನೋವಿಗೆ ಸ್ಪಂದಿಸುವವರೆ ನಿಜವಾದ ಬರಹಗಾರರು. ಕಾವ್ಯ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಟ್ಟ ಕವಯತ್ರಿಯರು ಸಮಾಜ ಪರಿವರ್ತನೆಗೆ ದಾರಿ ದೀಪವಾಗಲಿ ಎಂದರು.
ಖ್ಯಾತ ಕ್ಯಾನ್ಸರ್ ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನ್ಯೆ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಲೇಖಕರಾದ ಬಸಮ್ಮ ಸಜ್ಜನ್, ಶ್ರೀದೇವಿ ಪೊಲೀಸ್ ಪಾಟೀಲ, ಆರ್.ಸಿ.ಎಚ್.ಡಾ.ಸಿದ್ದು ಪಾಟೀಲ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಗೌರವ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿದರು.
ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಸಂತೋಷ ಕುಡಳ್ಳಿ, ಎಸ್.ಕೆ. ಬಿರಾದಾರ, ಕಲ್ಯಾಣಕುಮಾರ ಸಂಗಾವಿ, ಚನ್ನಮಲ್ಲಯ್ಯಾ ಹಿರೇಮಠ, ನೀಲಕಂಠರಾಯಗೌಡ ಕೋಳಕೂರ, ಚಂದ್ರಶೇಖರ ಮಲ್ಲಾಬಾದ, ಎಸ್.ಟಿ.ಬಿರಾದಾರ, ಶ್ರೀಹರಿ ಕರಕೆಳ್ಳಿ, ಗಣೇಶ ಜಾಗೀರದಾರ, ನಿಂಗಣ್ಣಗೌಡ ಸೊನ್ನ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ರೇವಣಸಿದ್ದಪ್ಪ ಜೀವಣಗಿ, ನರಸಿಂಗರಾವ ಹೇಮನೂರ, ಕಿರಣ ಪಾಟೀಲ, ಧರ್ಮರಾಜ ಜವಳಿ, ವಿನೋದಕುಮಾರ ಜೇನವೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.