ಕಲಬುರಗಿ: ಭೂ ದಾಖಲೆ ಇಲಾಖೆಯ ಉಪನಿರ್ದೇಶಕ, ಸರ್ವೇಯರ್ ಲೋಕಾಯುಕ್ತ ಬಲೆಗೆ
ಪ್ರವೀಣ್ ಜಾಧವ್ | ಶರಣ ಗೌಡ
ಕಲಬುರಗಿ: ಜಮೀನು ಪೋಡಿ ಮಾಡಿಕೊಡಲು 1.5 ಲಕ್ಷ ಲಂಚ ಪಡೆಯುವಾಗ ಭೂಮಾಪನ ಇಲಾಖೆಯ ಸಿಬ್ಬಂದಿ ಡಿಡಿಎಲ್ಆರ್ ಮತ್ತು ಸರ್ವೇಯರ್ ಇಬ್ಬರು ಸೋಮವಾರ ಕಲಬುರಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಭೂಮಾಪನ ಉಪ ನಿರ್ದೇಶಕರ ಕಚೇರಿಯ ಡಿ.ಡಿ.ಎಲ್.ಆರ್ ಆಗಿರುವ ಪ್ರವೀಣ್ ಜಾಧವ್ ಮತ್ತು ಸರ್ವೇಯರ್ ಶರಣ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಭೂಮಾಪನ ಇಲಾಖೆಯ ಸಿಬ್ಬಂದಿ ರೇವಣಸಿದ್ದ ಮೂಲಗೆ ಅವರಿಗೆ ಸಣ್ಣ ಪುಟ್ಟ ವಿಷಯದಲ್ಲಿ ನಿಮಗೆ ಅಮಾನತ್ತು ಮಾಡುತ್ತೇನೆ ಬೆದರಿಸಿ ಮಾನಸಿಕ ಹಿಂಸೆ ನೀಡಿ ಪ್ರತಿಯೊಂದು ಕಡೆತಕ್ಕಾಗಿ ಹಣ ಕೊಡಬೇಕೆಂದು ಬೇಡಿಕೆ ಇಡುತಿದ್ದರು ಎಂದು ದೂರು ನೀಡಲಾಗಿದ್ದು, ಅದರಂತೆ ಬ್ರಹ್ಮಪುರ ಸರ್ವೆ ನಂ.89/4 ಅಳತೆ 12.7 ಎಕರೆ ಜಮೀನಿನಲ್ಲಿ 25 ಗುಂಟೆ ಜಮೀನನ್ನು ಪೋಡಿ ಮಾಡಲು ರೂ.3.5 ಲಕ್ಷದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅದರಂತೆ 1.5 ಲಕ್ಷ ಮುಂಗಡವಾಗಿ ಲಂಚಪಡೆಯುವಾಗ ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್.ಪಿ .ಜಾನ್ ಆಂಟೋನಿ ಮಾರ್ಗದರ್ಶನದ ಡಿ.ವೈ.ಎಸ್.ಪಿ ಗೀತಾ ಬೆನಾಳ, ಮಂಜುನಾಥ್, ಇನ್ಸ್ಪೆಕ್ಟರ್ ರಾಜಶೇಖರ್ ಪ್ರದೀಪ್ ಹಾಗೂ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.