ಕಲಬುರಗಿ | ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ
ಪ್ರೀತಿ ರಾಜ್
ಕಲಬುರಗಿ : ಫೋನ್ ಪೇ ಮೂಲಕ 17 ಸಾವಿರ ರೂ. ಲಂಚ ಪಡೆಯುವಾಗ ಪಿಡಿಒ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಗರದ ದರಿಯಾಪುರದಲ್ಲಿ ನಡೆದಿದೆ.
ಕಲಬುರಗಿಯ ತಾಲೂಕಿನ ಕವಲಗಾ (ಬಿ) ಗ್ರಾಮದ ಪಿಡಿಒ ಪ್ರೀತಿರಾಜ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕವಲಗಾ (ಬಿ) ಗ್ರಾಮದ ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರಿಗೆ ಕೆಲಸಕ್ಕೆ ಪುನಃ ತೆಗೆದುಕೊಳ್ಳಲು ಮತ್ತು ಆರು ತಿಂಗಳ ವೇತನವನ್ನು ಮಂಜೂರು ಮಾಡುವ ಸಲುವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಬಿಕೆ.ಉಮೇಶ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಸಿಬ್ಬಂದಿ ಮಸೂದ್, ಮಲ್ಲಿನಾಥ್, ಬಸವರಾಜ್, ಸಂತೋಷಿ, ಮಧುಮತಿ, ಪ್ರಮೋದ್ ಅವರನ್ನು ಒಳಗೊಂಡ ತಂಡವು ದಾಳಿ ನಡೆಸಿ, ಪಿಡಿಒ ಅಧಿಕಾರಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.