ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎ.17ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಕಲಬುರಗಿ : ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಡಿ ಗ್ರೂಪ್ ನೌಕರರ ಹೊರಗುತ್ತಿಗೆ ಪದ್ದತಿ ರದ್ದುಪಡಿಸಿ, ಸೇವೆ ಖಾಯಂಗೊಳಿಸಬೇಕು, ಕನಿಷ್ಠ ವೇತನ ಮಾಸಿಕ 39,950 ರೂ. ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಆಗ್ರಹಿಸಿ ಎ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಸತಿನಿಲಯ, ವಸತಿ ಶಾಲೆ, ಕಾಲೇಜು ಹಾಗೂ ಆಶ್ರಮ ಶಾಲೆಗಳಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಸಹಾಯಕರು, ಕಾವಲುಗಾರ ಇತ್ಯಾದಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಆಯಾ ಹುದ್ದೆಗಳಲ್ಲೇ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ರಾತ್ರಿ ಕಾವಲುಗಾರರಿಗೆ ವಾರದ ರಜೆ ನೀಡುವುದು, ಸರ್ಕಾರದಿಂದಲೇ ನೇರವಾಗಿ ವೇತನ ಪಾವಸಿಬೇಕು ಸೇರಿದಂತೆ 15 ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯಮಟ್ಟದ ಬಹೃತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ 500 ಜನರು ಭಾಗವಹಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಹಾಸ್ಟೆಲ್ ಡಿ ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಎಂ.ಜೆ. ಶರಣು ಹೇರೂರ್, ಬಸವರಾಜ ಹುಳಗೋಳ, ಸದಾನಂದ, ಈಶಮ್ಮ, ಗೀತಾ ಸೇರಿದಂತೆ ಇತರರು ಇದ್ದರು.