ಕಲಬುರಗಿ | ಉಮರಗಾ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಶಾಸಕ ಬಿ.ಆರ್.ಪಾಟೀಲ್ ಚಾಲನೆ

ಕಲಬುರಗಿ : ಆಳಂದ ಪಟ್ಟಣದಿಂದ ಖಜೂರಿ ಬ್ವಾರ್ಡರ್ ವರೆಗಿನ ಹದಗೆಟ್ಟಿದ್ದ ಉಮರಗಾ ಮಾರ್ಗದ ರಾಜ್ಯ ಹೆದ್ದಾರಿ ದುರಸ್ಥಿ ಮತ್ತು ಡಾಂಬರೀಕರಣ ಕಾಮಗಾರಿಗೆ ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಅವರು ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 4 ಕೋಟಿ ರೂ. ವೆಚ್ಚದಲ್ಲಿ ಖಜೂರಿ ಬ್ವಾರ್ಡರ್ ನಿಂದ ಆಳಂದ ಮಾರ್ಗದ 3 ಕಿ.ಮೀ. ರಸ್ತೆ ಡಾಂಬರಿಕರಣ ಕಾಮಗಾರಿಗೆ ಖಜೂರಿಯಲ್ಲಿ ಶಾಸಕರು ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಿಂದ ಖಜೂರಿ ಬಾರ್ಡ್ವರ್ ವರೆಗೆ ಹೆದ್ದಾರಿ ತೀರಾ ಹದಗೆಟ್ಟಿರುವುದನ್ನು ಸರಿಪಡಿಸಲು ಮೂರು ಹಂತದಲ್ಲಿ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂಳಿದ ಎರಡು ಹಂತದ ಕಾಮಗಾರಿಗೆ ಒಟ್ಟು 20 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ತಾಲ್ಲೂಕಿನ ಬಹುತೇಕ ಕಡೆ ರಸ್ತೆಗಳು ಹದಗೆಟ್ಟಿದ್ದರಿಂದ ಹಂತ ಹಂತವಾಗಿ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿಂದಿನ ಬಿಜೆಪಿ ಸರಕಾರ ನಿಲ್ಲಿಸಿದ ಕೃಷಿ ಭಾಗ್ಯ ಯೋಜನೆಯನ್ನು ರಾಜ್ಯ ಸರಕಾರ ಪುನಾರಂಭಿಸಿದೆ. ಕ್ಷೇತ್ರದಲ್ಲಿ ಅಂತರ್ಜಲ ಹೆಚ್ಚಿಸಲು ಶಿರಪೂರ ಮಾದರಿ ಕಾಮಗಾರಿಯ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ರೈತರ ಪಂಪಸೆಟ್ಗಳ ವಿದ್ಯುತ್ ಟ್ರಾನ್ಸ್ ಫರಂಗಳ ಟೆಸ್ಟಿಂಗ್ ಕೇಂದ್ರವನ್ನು ಸ್ಥಳೀಯವಾಗಿ ಆರಂಭಿಸಲು ಅನುದಾನ ನೀಡಲಾಗಿದೆ. ಇದರಿಂದ ರೈತರಿಗೆ ತೊಂದರೆ ತಪ್ಪಲಿದೆ. ಅಧಿಕಾರವಧಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಬದ್ಧವಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೈನುಗಾರಿಗೆ 2 ಲಕ್ಷ ರೂ. ಸಾಲ:
ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಉತ್ತೇಜಿಸಲು ಎಮ್ಮೆ, ಆಕಳು ಖರೀದಿಸಲು ಪ್ರತಿಯೊಂದು ಸಹಕಾರಿ ಸಂಘಗಳಾದ ಸೊಸೈಟಿಗಳಿಂದ ತಲಾ 100 ಜನರಿಗೆ 2ಲಕ್ಷ ರೂ. ವರೆಗೆ ಸಾಲ ನೀಡಲು ಸರಕಾರ ನಿರ್ಧರಿಸಿದೆ ಎಂದು ಶಾಸಕರು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಭೀಮರಾವ್ ಢಗೆ ಅವರು, ಗ್ರಾಮದಲ್ಲಿನ ಸರಕಾರಿ ಪಿಯು ಕಾಲೇಜಿನ ಬೇಡಿಕೆ ಮತ್ತು ಇಂದಿರಾಗಾoಧಿ ವಸತಿ ಶಾಲೆಯನ್ನು ಪಿಯುಸಿವರೆಗೆ ಮೇಲ್ದರ್ಜೆಗೆರಿಸಬೇಕು ಹಾಗೂ ಹೊಸ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆಯ ಸೇರಿ ಇನ್ನಿತರ ಬೇಡಿಕೆಯ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.
ಲೋಕೋಪಯೋಗಿ ಇಲಾಖೆಯ ಎಇಇ ಆನಂದ, ರವಿ ಪಾಟೀಲ ಆಳಂಗಾ, ಶಿವಲಿಂಗಪ್ಪ ಬಂಗರಗೆ, ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ತುಕಾರಾಮ ವಗ್ಗೆ, ಗುತ್ತಿಗೆದಾರ ಸಗರ, ಜೈಪಾಲ ಭದ್ರೆ, ಗ್ರಾಪಂ ಮಾಜಿ ಅಧ್ಯಕ್ಷ ಪ್ರತಾಪ ಕುಲಕರ್ಣಿ, ರಾಮಮೂರ್ತಿ ಗಾಯಕವಾಡ ಸೇರಿ ನೆರೆ ಹೊರೆಯ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.