ಕಲಬುರಗಿ | ಅನುದಾನಿತ ಶಾಲಾ, ಕಾಲೇಜು ನೌಕರರ ಹೋರಾಟಕ್ಕೆ ಎಂಎಲ್ಸಿ ಶಶೀಲ್ ನಮೋಶಿ ಬೆಂಬಲ
ಶಶೀಲ್ ಜಿ.ನಮೋಶಿ
ಕಲಬುರಗಿ : ಡಿ.12 ರಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಂಘ ಬೆಳಗಾವಿಯ ಸುವರ್ಣ ಸೌಧದ ಎದುರು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈಗಾಗಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ತನ್ನ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ನೌಕರರಿಗೆ ಎನ್ ಪಿ ಎಸ್ ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡುತ್ತದೆ ಎಂದು ಹೇಳಿತ್ತು. ಈ ಎಲ್ಲ ನೌಕರರ ಮಾತು ಪಡೆದು ಅಧಿಕಾರಕ್ಕೆ ಬಂದು ಒಂದುವರೆ ವರ್ಷಗಳು ಕಳೆದರೂ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ, ಕೂಡಲೇ ರಾಜ್ಯ ಸರಕಾರ ಜಿಪಿಎಸ್ ಜಾರಿಗೊಳಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಒಂದು ವೇಳೆ ಓಪಿಎಸ್ ಜಾರಿ ಮಾಡುವಲ್ಲಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವ ಎನ್ ಪಿ ಎಸ್ ಪಿಂಚಣಿಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೆ ಜಾರಿಗೊಳಿಸಬೇಕು. ನೇಮಕಾತಿ ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರಿ ನೌಕರರಿಗೆ ನೀಡುವಂತೆ ಸರಕಾರವೇ ಭರಿಸಬೇಕು ಎಂದು ತಿಳಿಸಿದ್ದಾರೆ.
ಸರಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ವಿಮಾ ಯೋಜನೆ, ಜ್ಯೋತಿ ಸಂಜೀವಿನಿಯನ್ನು ಅನುದಾನಿತ ನೌಕರರಿಗೂ ವಿಸ್ತರಿಸಬೇಕು. ಕಳೆದ 22 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಇಲ್ಲಿಯವರೆಗೂ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಿಲ್ಲ, ಕೂಡಲೇ ರಾಜ್ಯ ಸರಕಾರ ನೇಮಕಾತಿ ಪ್ರಕ್ರಿಯೆಗೆ ಆದೇಶ ಹೊರಡಿಸಬೇಕು. ಸರಕಾರಿ ಶಾಲಾ-ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೌಕರರ ಮಧ್ಯೆ ತಾರತಮ್ಯವಿರಬಾರದು ಎಂದು ಆಗ್ರಹಿಸಿದ್ದಾರೆ.