ಕಲಬುರಗಿ | ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಯೋಜನಾಧಿಕಾರಿ
ಚಂದ್ರಕಾಂತ ಗುರುಪಾದಪ್ಪ ಪಾಟೀಲ
ಕಲಬುರಗಿ : ಪಿಎಂ ಸ್ವನಿಧಿ ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಮಂಜೂರಾಗಿರುವ 10 ಸಾವಿರ ರೂ. ಸಾಲವನ್ನು ಬಿಡುಗಡೆಗೊಳಿಸಲು 7,500 ರೂ. ಫೋನ್ ಪೇ ಮೂಲಕ ಪಡೆಯುತ್ತಿದ್ದ ಚಿತ್ತಾಪೂರ ತಾಲ್ಲೂಕಿನ ಪುರಸಭೆಯ ಯೋಜನಾಧಿಕಾರಿಯೊಬ್ಬರು, ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಚಿತ್ತಾಪೂರದ ವಾಡಿ ಪುರಸಭೆಯಲ್ಲಿ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತ ಗುರುಪಾದಪ್ಪ ಪಾಟೀಲ ಎಂಬುವವರೇ ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಂದ್ರಕಾಂತ ಪಾಟೀಲ ಅವರು, ಪಿಎಂ ಸ್ವನಿಧಿ ಅಡಿ ಸಾಲವನ್ನು ವಿತರಿಸಲು ಪ್ರತಿಯೊಬ್ಬರಿಂದ ತಲಾ 750 ರಂತೆ 18 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಫಲಾನುಭವಿ ಮುಹಮ್ಮದ್ ರಫೀಕ್ ಜಲಾಲುದ್ದೀನ್ ಅನೂರಿ (42) ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬೇಡಿದ್ದ ಲಂಚವನ್ನು ಚಂದ್ರಕಾಂತ ಖಾತೆಗೆ ಫಲಾನುಭವಿಯೋರ್ವರು ವರ್ಗಾವಣೆ ಮಾಡಿದ್ದರು. ಸ್ಥಳದಲ್ಲೇ ಇದ್ದ ಲೋಕಾಯುಕ್ತ ಪೊಲೀಸರು ಯೋಜನಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ ಹಳಗೋದಿ, ಸಿಬ್ಬಂದಿಯಾದ ಶರಣು, ಪ್ರದೀಪ, ಅನಿಲ್, ಮಂಜುನಾಥ್, ಸಿದ್ದು ಬಿರಾದಾರ, ಹಣಮಂತ ಭಾಗವಹಿಸಿ, ಅಧಿಕಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ಈ ಮಧ್ಯೆಯೇ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.