37 ಬೈಕ್ ಕಳವು ಪ್ರಕರಣ ಭೇದಿಸಿದ ಕಲಬುರಗಿ ನಗರ ಪೊಲೀಸರು: 105 ಬೈಕ್ ಗಳು ವಶ; 30 ಮಂದಿಯ ಬಂಧನ
ಕಲಬುರಗಿ: ನಗರದ ವಿವಿಧೆಡೆ ದಾಖಲಾಗಿರುವ 37 ಬೈಕ್ ಗಳ ಕಳವು ಪ್ರಕರಣಗಳಲ್ಲಿ 30 ಬೈಕ್ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 54.55 ಲಕ್ಷ ರೂ. ಮೌಲ್ಯದ 105 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 28 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು, 10 ಮಂದಿಯನ್ನು ಬಂಧಿಸಲಾಗಿದೆ. ಅದರಂತೆ ಸ್ಟೇಷನ್ ಬಜಾರ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ, 23 ವಾಹನಗಳು, ಆರ್.ಜಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಜನರನ್ನು ಬಂಧಿಸಿ, 8 ಬೈಕ್, ಅಶೋಕ ನಗರ ಠಾಣೆಯ ಪ್ರದೇಶದಲ್ಲಿ 4 ಮಂದಿಯನ್ನು ಬಂಧಿಸಿ, 20 ಬೈಕ್, ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ, 6 ಬೈಕ್, ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ, 9 ಬೈಕ್, ಎಂ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಿ, 6 ಬೈಕ್, ವಿವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ, ಅವರ ಬಳಿ 5 ಬೈಕ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಳ್ಳತನದಲ್ಲಿ ಬಂಧಿತರಾದ 30 ಆರೋಪಿಗಳ ಪೈಕಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರಿದ್ದು, ಆರೋಪಿಗಳಲ್ಲಿ ಹೆಚ್ಚಿನವರು ನಗರ ನಿವಾಸಿಗಳಾಗಿದ್ದಾರೆ. ಬಹಳಷ್ಟು ಆರೋಪಿಗಳು ಮದ್ಯ ಸೇವನೆ ಸೇರಿದಂತೆ ತಮ್ಮ ದುಂದುವೆಚ್ಚಗಳಿಗಾಗಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಕಮಿಷನರ್ ಮಾಹಿತಿ ನೀಡಿದರು.
ವಾಹನ ಕೀ ಬಿಟ್ಟು ಹೋದವರು, ಸಿಸಿಟಿವಿ ಕ್ಯಾಮರಾ ಇಲ್ಲದ ಪ್ರದೇಶಗಳಲ್ಲಿ ನಿಲ್ಲಿಸಿರುವ ಬೈಕ್ ಗಳು, ರಸ್ತೆ ಬದಿಯಲ್ಲಿ 2- 3 ದಿನಗಳಿಂದ ಸ್ಥಳದಲ್ಲೇ ಇದ್ದ ಹೆಚ್ಚಿನ ಬೈಕ್ ಗಳ ಕಳ್ಳತನವಾಗಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು.