ಕಲಬುರಗಿ | ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಕುರಿತಂತೆ ಸಚಿವ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಬಗ್ಗೆ ಅವಶ್ಯ ಸಲಹೆ ನೀಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಾನದಂಡ ನಿಗದಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡುವುದು, ಹೊಸ ಬೋರ್ ವೆಲ್ ಕೊರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಬರ ಘೋಷಣೆಯಾದರೆ ಬೇಕಾಗುವ ಅನುದಾನಕ್ಕಾಗಿ ಪಿಡಿ ಅಕೌಂಟ್ ನಲ್ಲಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲು ಕೂಡಾ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಮುಂದಿನ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚಿಸಲಾಗುವುದು ಎಂದರು.
ಜನರಿಗೆ ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ನಂತರ ಬೆಳೆಗಳಿಗೆ ಹರಿಸಲು ಯೋಚಿಸಲಾಗುತ್ತದೆ. ನಮ್ಮ ಭಾಗದ ಜನರಿಗೆ ನೀರು ಒದಗಿಸುವ ವಿಚಾರದಲ್ಲಿ ಮಹಾರಾಷ್ಟ್ರದಿಂದ ನೀರು ಹರಿಸಲು ಪತ್ರಬರೆಯುವಂತೆ ಸಿಎಂ ಅವರಿಗೆ ಮನವಿ ಮಾಡಲಾಗಿತ್ತು. ಹಾಗಾಗಿ, ಕೃಷ್ಣಾ ನದಿಗೆ ನೀರು ಹರಿಸುವಂತೆ ಈಗಾಗಲೇ ಸಿಎಂ ಮಹಾರಾಷ್ಟ್ರ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಅಲ್ಲಿನ ಡ್ಯಾಂ ಗಳಲ್ಲಿ ನೀರಿನ ಲಭ್ಯತೆ ಕುರಿತಂತೆ ಮಹಾರಾಷ್ಟ್ರ ಸರ್ಕಾರ ಅಧಿಕೃತ ಮಾಹಿತಿ ಒದಗಿಸಿಲ್ಲ ಎಂದರು.
ತಮಿಳು ನಾಡಿಗೆ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಮಾತ್ರ ರಾಜ್ಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕಾವೇರಿಗೆ ಇರುವಷ್ಟು ಮಹತ್ವ ಕೃಷ್ಣಾಗೂ ಇದೆ ಎಂದರು.