ಕಲಬುರಗಿ | ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ಜಾಲ ಪತ್ತೆ: ಪ್ರಮುಖ ಆರೋಪಿಯ ಬಂಧನ
28 ವಿಶ್ವವಿದ್ಯಾನಿಲಯಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ

ಕಲಬುರಗಿ: ದೇಶಾದ್ಯ ವಿವಿಧ ರಾಜ್ಯಗಳ 28 ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ಹೆಸರಿನಲ್ಲಿ ನಕಲು ಅಂಕ ಪಟ್ಟಿ ತಯಾರಿಸಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕಲಬುರಗಿ ಸಿಇಎನ್ ಪೊಲೀಸರು, ದಿಲ್ಲಿ ಮೂಲದ ಅಂತರ್ ರಾಜ್ಯದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ದಿಲ್ಲಿ ಮೂಲದ ದ್ವಾರಕ ಮೋಡ್ ರಾಮಾ ಪಾರ್ಕ ಅಪಾರ್ಟಮೆಂಟ್ ನಿವಾಸಿ ರಾಜೀವ ಸಿಂಗ್ ಅರೋರಾ ಪ್ರೇಮಸಿಂಗ್ ಬಂಧಿತ ಆರೋಪಿ. ಬೆಂಗಳೂರು, ಮೈಸೂರು, ಆಗ್ರಾ, ರಾಜಸ್ಥಾನ, ಉತ್ತರ ಪ್ರದೇಶ,ಹಿಮಾಚಲ ಪ್ರದೇಶ, ಕುರಕ್ಷೇತ್ರ, ಛತ್ತಿಸ್ ಘಡ, ಫಿರೋಝಾಬಾದ್, ಬಿಲಾಸಪುರ, ಭೂಪಾಲ್, ಕನಪೂರ, ಝಾನ್ಸಿ, ನೈನಿತಾಲ್,ತಮಿಳನಾಡು, ಉತ್ತರಾಖಂಡ, ಅರುಣಾಚಲ್ ಪ್ರದೇಶ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳು ಸೇರಿದಂತೆ ನಕಲಿ ವಿಶ್ವವಿದ್ಯಾನಿಲಯಗಳ ಹೆಸರಲ್ಲಿ ಪಿಯುಸಿ ಡಿಪ್ಲೊಮಾ ಇನ್ಎಜುಕೇಶನ್, ಡಿಪ್ಲೊಮಾ ಆಫ್ ಮೆಡಿಕಲ್ ಲ್ಯಾಬರೋಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಫಾರ್ಮಸಿ, ಡಿಪ್ಲೊಮಾ ಆಫ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೋಸ್ಟ್ ಗ್ರ್ಯಾಜುವೇಟ್ ಡಿಪ್ಲೊಮಾ ಇನ್ ಕಂಪ್ಯೂಟರ್, ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್, ಪಿ.ಎಚ್.ಡಿ ಎಂಟ್ರೇನ್ಸ್ ಟೆಸ್ಟ್, ಪಿ.ಎಚ್.ಡಿ ಸೆಲೆಕ್ಷನ್ ಸರ್ಟಿಫಿಕೇಟ್, ಆರ್.ಡಿ.ಸಿ, ಬ್ಯಾಚುಲರ್ ಆಫ್ ಎಜುಕೇಶನ್,ಬಿ.ಎಡ್ ಇತ್ಯಾದಿ 26 ಕೋರ್ಸಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯಿಂದ ನಕಲಿ ಅಂಕಪಟ್ಟಿ ತಯಾರಿಸಲು ಬಳಕೆ ಮಾಡುತ್ತಿದ್ದ 2 ಲ್ಯಾಪ್ ಟಾಪ್ ಗಳು, 1 ಪ್ರಿಂಟರ್, 36 ಮೊಬೈಲ್ ಫೋನ್ ಗಳು ಮತ್ತು 28 ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿರುವ ಅಂದಾಜು ಒಟ್ಟು 522 ನಕಲಿ ಅಂಕಪಟ್ಟಿಗಳು ಹಾಗೂ 28 ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿರುವ ಅಂದಾಜು ಒಟ್ಟು 122 ನಕಲಿ ಸೀಲ್ ಗಳು, ನಕಲಿ ಅಂಕಪಟ್ಟಿ ತಯಾರಿಸಲು ವಿವಿಧ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ಮುದ್ರಿಸಿಟ್ಟುಕೊಂಡ ಒಟ್ಟು 1,626 ಖಾಲಿ ಪೇಪರ್ ಗಳು, ವಿವಿಧ ಹೆಸರಿನಲ್ಲಿ ಆರೋಪಿತನು ಬಳಕೆ ಮಾಡುತ್ತಿದ್ದ ಸುಮಾರು 87 ಬ್ಯಾಂಕ್ ಖಾತೆಗಳ ಪಾಸ್ ಬುಕ್, ಚೆಕ್ ಬುಕ್, ಎಟಿಎಂ ಕಾರ್ಡಗಳು, ಬೇರೆ ಬೇರೆಯವರ ಹೆಸರಿನಲ್ಲಿ ತಯಾರಿಸಿಟ್ಟುಕೊಂಡ ನಕಲಿ ಐ.ಡಿ. ಕಾರ್ಡಗಳು ಹಾಗೂ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿಟ್ಟುಕೊಂಡ 1,20,000 ರೂ. ನಗದು ಜಪ್ತಿ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದವರು ಮಾಹಿತಿ ನೀಡಿದ್ದಾರೆ.
ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಅಪರಾಧ ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿತರ ಪತ್ತೆ ಕಾರ್ಯಚರಣೆ ಮುಂದುವರೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.