ಕಲಬುರಗಿ | ನರೇಗಾ ಕೂಲಿ ಮೊತ್ತ 349 ರೂ. ನಿಂದ 370 ರೂ. ಗೆ ಹೆಚ್ಚಳ: ಭಂವರ್ ಸಿಂಗ್ ಮೀನಾ

ಕಲಬುರಗಿ : ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೊನ್ನಕಿರಣಗಿ ಗ್ರಾಮದ ಕೆರೆಹೂಳೆತ್ತುವ ಕಾಮಗಾರಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು ಮಂಗಳವಾರ ಚಾಲನೆ ನೀಡಿದರು.
ಈ ಮೊದಲು ನರೇಗಾ ಒಂದು ದಿನದ ಕೂಲಿ ಮೊತ್ತ 349 ಇದ್ದು, 2025ರ ಏಪ್ರಿಲ್ 1 ರಿಂದ ನರೇಗಾ ಕೂಲಿ ಮೊತ್ತ 370 ರೂ.ಗಳಿಗೆ ಹೆಚ್ಚಿಸಲಾಗಿದೆ. ಎಲ್ಲರೂ ನಿಗದಿಪಡಿಸಿದ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕು. ಕಾಮಗಾರಿ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಕಿಟ್ ಹಾಗೂ ಓಆರ್ ಎಸ್ ಪ್ಯಾಕೇಟ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿ.ಡಿ.ಓ.) ಮೇಲೆ ಇರುತ್ತದೆ. ನಂತರ ಸಿ.ಇ.ಓ.. ಅವರು ಕಾಮಗಾರಿ ಸ್ಥಳದ ಬಗ್ಗೆ ಪರಿಶೀಲನೆ ನಡೆಸಿದರು. ಕಾಮಗಾರಿ ಸ್ಥಳದಲ್ಲಿ 303 ಕೂಲಿ ಕಾರ್ಮಿಕರು ಕೆಲಸನಿರ್ವಹಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಪ್ರತಿಯೊಬ್ಬರು ಪಿ.ಎಮ್.ಜೆ.ಜೆ.ವೈ. (PMJJY) ಹಾಗೂ ಪಿ.ಎಮ್.ಎಸ್.ಬಿ.ವೈ. (PMSBY) ಯೋಜನೆಗಳ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಸೈಯದ ಪಟೇಲ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರೇವಣಸಿದ್ದಪ್ಪ ಗೌಡರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಕಾಗೆ, ಗ್ರಾಮ ಪಂಚಾಯತಿ ಅಧ್ಯಕ್ಷರು, ಐ.ಈ.ಸಿ.ಸಂಯೋಜಕ ಮೋಸಿನ್‍ಖಾನ್, ತಾಂತ್ರಿಕ ಸಂಯೋಜಕರಾದ ಸತೀಶ, ಜಗದೀಶ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕ್ಷೇತ್ರ ಸಹಾಯಕ ಸದಾಶಿವ, ಗ್ರಾಮ ಪಂಚಾಯತಿ ಸಿಬ್ಬಂದಿ ಪ್ರೇಮಾ, ವಿಜಯಲಕ್ಷ್ಮೀ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.