ಕಲಬುರಗಿ | ಮಹಿಳಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶಾರದಾದೇವಿ ಜಾಧವಗೆ ಕಸಾಪದಿಂದ ಅಧಿಕೃತ ಆಹ್ವಾನ
ಬುಡಕಟ್ಟು ಜನಾಂಗಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟ ಕಸಾಪ : ಜಾಧವ ಶ್ಲಾಘನೆ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜ.19 ರಂದು ನಗರದ ಕನ್ನಡ ಭವನದ ಆವರಣದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರಾಧ್ಯಾಪಕರೂ ಆದ ಹಿರಿಯ ಲೇಖಕಿ ಡಾ.ಶಾರದಾದೇವಿ ಜಾಧವ ಅವರನ್ನು ಜಿಲ್ಲಾ ಕಸಾಪದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಪದಾಧಿಕಾರಿಗಳು ಫಲ ಪುಷ್ಪ, ತಾಂಬೂಲವನ್ನು ನೀಡಿ ಅಧಿಕೃತವಾಗಿ ಆಹ್ವಾನ ನೀಡಿದರು.
ನಂತರ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಭಾಷೆ, ಸಂಸ್ಕೃತಿ ಮತ್ತು ಸ್ತ್ರೀಪರ ಚಿಂತನೆಗಳ ಕುರಿತು ಕೃತಿಗಳನ್ನು ಪ್ರಕಟಿಸಿ ನಾಡಿನ ಮಹಿಳಾ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದವರಲ್ಲಿ ಡಾ.ಶಾರದಾದೇವಿ ಜಾಧವ ಪ್ರಮುಖರು.
ಜಿಲ್ಲೆಯ ಮಹಿಳಾ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡ ಸಾಹಿತಿಗಳಾಗಿದ್ದಾರೆ. ಆಧುನಿಕ ಸಾಹಿತ್ಯದ ಪರಿಕಲ್ಪನೆಯಲ್ಲಿ ಕೆಲ ಮಹತ್ವದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಮನುಷ್ಯರ ನಡುವೆ ಪ್ರೀತಿ ಇರಬೇಕು. ದ್ವೇಷ ಬೇಡ. ಒಂದಾಗುವ ಭಾವೈಕ್ಯತೆ ಅವಶ್ಯಕವಾಗಿದೆ. ಭಾಷೆ ಮತ್ತು ನಮ್ಮ ಸಂಸ್ಕೃತಿಗೆ ಸಾಹಿತ್ಯ ರಚನೆ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಹಿರಿಯ ಮಹಿಳಾ ಸಾಹಿತಿಯೊಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಮತ್ತಷ್ಟು ಗೌರವ ಹೆಚ್ಚಾಗಿದೆ ಎಂದು ಹೇಳಿದರು.
ಸರ್ವಾಧ್ಯಕ್ಷೆ ಡಾ.ಶಾರದಾದೇವಿ ಜಾಧವ ಮಾತನಾಡಿ, ಸ್ತ್ರೀಯರನ್ನು ಗೌರವಿಸುವ ಮತ್ತು ಸಮಾನತೆಯಿಂದ ಕಾಣುವ ಕಾರ್ಯ ಜಿಲ್ಲೆಯಲ್ಲಿ ಪರಿಷತ್ತು ಸಮರ್ಪಕವಾಗಿ ಮಾಡುತ್ತಿದೆ. ಇಂದಿನ ಉದಯೋನ್ಮುಖ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೂರಕ ವಾತಾವರಣ ನಿರ್ಮಿಸಿಕೊಡುವ ಪರಿಷತ್ತಿನ ಕಾರ್ಯ ಎಲ್ಲರೂ ಮೆಚ್ಚುವಂತಹದ್ದಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಣ್ಣ ಪ್ರಮಾಣದ ಸಾಧನೆಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿರುವುದು ನನ್ನ ಬದುಕಿನ ಅಮೂಲ್ಯ ಕ್ಷಣ ಎಂದು ಭಾವಿಸಿದ್ದೇನೆ. ಇದು ಇಡೀ ಸ್ತ್ರೀ ಕುಲಕ್ಕೆ ಬುಡಕಟ್ಟು ಜನಾಂಗಕ್ಕೆ ಕೊಟ್ಟ ಬಹು ದೊಡ್ಡ ಕೊಡುಗೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶರಣು ಹೊನ್ನಗೆಜ್ಜೆ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪೂಕರ್, ಮಹಿಳಾ ಪ್ರತಿನಿಧಿಗಳಾದ ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ಸಾಹಿತಿ ನರಸಿಂಗರಾವ ಹೇಮನೂರ, ಪ್ರಮುಖರಾದ ಜಗದೀಶ ಮರಪಳ್ಳಿ, ರಮೇಶ ಡಿ ಬಡಿಗೇರ, ಸೈಯದ್ ನಜಿರುದ್ದೀನ್ ಮುತ್ತವಲಿ, ನವಾಬ್ ಖಾನ್, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಗಣೇಶ ಚಿನ್ನಾಕಾರ, ರೂಪಾ ಪೂಜಾರಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಪದ್ಮಾವತಿ ನಾಯಕ್, ಪ್ರಭವ ಪಟ್ಟಣಕರ್, ಮಲ್ಲಿನಾಥ ಸಂಗಶೆಟ್ಟಿ, ರಮೇಶ ಜಾಧವ, ಶಿವಾನಂದ ಮಠಪತಿ. ಸೋಮಶೇಖರಯ್ಯಾ ಹೊಸಮಠ, ಶಿವಾನಂದ ಸುರವಸೆ ಅಣೂರ, ಮಲ್ಲಿನಾಥ ಸಂಗಶೆಟ್ಟಿ, ಚಂದ್ರಕಾoತ ಸೂರನ್, ಸಂತೋಷ ಮುಳಜೆ, ಶಿವಲಿಂಗಪ್ಪ ಶೆಳ್ಳಗಿ, ಭಾನುಕಾಂತರೆಡ್ಡಿ ಖೇಳಿಗಿ, ಯುನುಸ್ ಖಾನ್ ಖುರೇಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.