ಕಲಬುರಗಿ ಓಪನ್ | ಉಜ್ಬೇಕಿಸ್ತಾನದ ಸುಲ್ತಾನೋವ್ಗೆ ಸಿಂಗಲ್ಸ್ ಪ್ರಶಸ್ತಿ
ಡಬಲ್ಸ್ ಚಾಂಪಿಯನ್ ರಷ್ಯಾದ ಬೊಬ್ರೊವ್ಗೆ ನಿರಾಶೆ
- ಚಾಂಪಿಯನ್ ಖುಮೋಯುನ್ ಸುಲ್ತಾನೋವ್ ಮತ್ತು ಬೊಗ್ಡಾನ್ ಬೊಬ್ರೊವ್
ಕಲಬುರಗಿ : ರಷ್ಯಾದ ಬೊಗ್ಡಾನ್ ಬೊಬ್ರೊವ್ ವಿರುದ್ಧ ಉಜ್ಬೇಕಿಸ್ತಾನ್ ಆಟಗಾರ ಖುಮೋಯುನ್ ಸುಲ್ತಾನೋವ್ ಅವರು ನೇರ ಸೆಟ್ಗಳಲ್ಲಿ ಗೆಲ್ಲುವ ಮೂಲಕ ಕಲಬುರಗಿ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಅಂಗಳದಲ್ಲಿ ರವಿವಾರ ನಡೆದ ಐಟಿಎಫ್ ಕಲಬುರಗಿ ಓಪನ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಖುಮೋಯುನ್ ಸುಲ್ತಾನೋವ್ ಅವರು ರಷ್ಯಾದ ಬೊಗ್ಡಾನ್ ಬೊಬ್ರೊವ್ ಅವರನ್ನು 6-2, 6-1 ಅಂತರದಲ್ಲಿ ಸೋಲಿಸಿದರು. ಈ ಮೂಲಕ ಸುಲ್ತಾನೋವ್, ಋತುವಿನ ಐದನೇ ಪ್ರಶಸ್ತಿಯನ್ನು ಗೆದ್ದು ಬೀಗಿದರು ಮತ್ತು ಭಾರತದಲ್ಲಿ ಎರಡನೇ ಪ್ರಶಸ್ತಿಯಾಗಿದೆ. ವರ್ಷದ ಆರಂಭದಲ್ಲಿ ಚಂಡೀಗಡದಲ್ಲಿ ಗೆದ್ದಿದ್ದರು.
ಸೆಟ್ ಪ್ರಾರಂಭವಾದ ಮೊದಲೆರಡು ಆಟಗಳಲ್ಲಿ ಟೈಟಾನಿಕ್ ಘರ್ಷಣೆಯನ್ನು ಕಾಣಿಸಿಕೊಂಡಿತು. ಹಾಗಾಗಿ ಪ್ರೇಕ್ಷಕರಿಗೆ ನೋಡುವ ರಸದೌತಣ ಸಿಕ್ಕಿತು. ಆದರೆ ಒಮ್ಮೆ ಸುಲ್ತಾನೋವ್ ಆರಂಭಿಕ ಸೆಟ್ನ ಆರನೇ ಗೇಮ್ನಲ್ಲಿ ಬೊಬ್ರೊವ್ ಅನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. ಕ್ರಮೇಣ ಬಲಿಷ್ಟವಾಗತೊಡಗಿದ ಸುಲ್ತಾನೋವ್, ಬೊಬ್ರೊವ್ ಅವರನ್ನು ಸೋಲಿನಂಚಿಗೆ ಸಿಲುಕಿಸಿಬಿಟ್ಟರು.
ಶನಿವಾರದಂದು ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಎರಡನೇ ಶ್ರೇಯಾಂಕದ ಬೊಬ್ರೊವ್, ಅಂಕಣದಲ್ಲಿ ಮೊದಲ ಸೆಟ್ ಸೋತ ಬಳಿಕ ಮತ್ತೊಂದು ಸೆಟ್ ನ ಎರಡನೇ ಆಟದಲ್ಲಿ ಮಂಕಾಗಿದ್ದರು. ಈ ವೇಳೆ ಸಮಯ ಉಪಯೋಗಿಸಿಕೊಂಡ ಸುಲ್ತಾನೋವ್, ಎರಡನೇ ಸೆಟ್ ನಲ್ಲೇ ಬೊಬ್ರೊವ್ ಅವರನ್ನು ಹಿಮ್ಮೆಟ್ಟಿಸಿ, 6-1 ಅಂತರದಲ್ಲಿ ಜಯ ಸಾಧಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುಲ್ತಾನೋವ್, 'ನಾನು ಅಂಕಗಳನ್ನು ಉಳಿಸಿಕೊಂಡಿದ್ದರಿಂದ ಈ ಗೆಲುವು ನನಗೆ ಮುಖ್ಯವಾಗಿತ್ತು, ಭಾರತದಲ್ಲಿ ಮತ್ತೊಮ್ಮೆ ಗೆಲ್ಲಲು ಬಹಳಷ್ಟು ಖುಷಿಯಾಯಿತು' ಎಂದು ಹೇಳಿದರು.
ʼಹಲವು ಪ್ರಶಸ್ತಿ ಪಡೆದವುಗಳಲ್ಲಿ ಕಲಬುರಗಿ ಐಟಿಎಫ್ ಪ್ರಶಸ್ತಿ ಪಡೆದಿರುವುದು ತುಂಬಾ ಸಂತೋಷವಾಯಿತು. ಎಲ್ಲ ಟೂರ್ನಿಗಿಂತ ಈ ಟೂರ್ನಿ ಮನಸಿಗೆ ಹಿಡಿಸಿತುʼ ಎಂದು ಚಾಂಪಿಯನ್ ಸುಲ್ತಾನೋವ್ ಅವರ ತಾಯಿ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.
ಚಾಂಪಿಯನ್ ಸುಲ್ತಾನೋವ್ 3,600 ಡಾಲರ್ ಚೆಕ್ ಜೊತೆಗೆ 25 ಎಟಿಪಿ ಶ್ರೇಯಾಂಕಗಳನ್ನು ಗಳಿಸಿದರು.
ಇದೇ ವೇಳೆಯಲ್ಲಿ ರನ್ನರ್ ಅಪ್ ಆಗಿರುವ ರಷ್ಯಾದ ಬೊಬ್ರೊವ್ ಬಾರಿ 2,120 ಡಾಲರ್ ಚೆಕ್ ಮತ್ತು 16 ಎಟಿಪಿ ಶ್ರೇಯಾಂಕಗಳು ಪಡೆದರು.