ಗೃಹ ಇಲಾಖೆಯಲ್ಲಿ ಕ್ರೀಡೆಗಳ ಮೂಲಕ ಭ್ರಾತೃತ್ವ ಇಮ್ಮಡಿ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ
ಕಲಬುರಗಿ: ಪೊಲೀಸ್ ಇಲಾಖೆ ಬಹಳ ಉತ್ತಮವಾಗಿ ಇಂದಿಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಇಲಾಖೆಯಲ್ಲಿ ಭ್ರಾತೃತ್ವ ಇಮ್ಮಡಿಗೊಳಿಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ನಗರದ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಕಟ್ಟುನಿಟ್ಟಾಗಿ ಜನರಿಗೆ ತಲುಪುಬೇಕಾದರೆ ಗೃಹ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಕಾನೂನಿನ ಸಂರಕ್ಷಣೆಯೇ ಮೂಲಮಂತ್ರವಾಗಿಸಿಕೊಂಡಿರುವ ಪೊಲೀಸರ ಬಳಿಗೆ ಸಾರ್ವಜನಿಕರು ಬರುವುದಕ್ಕೆ ಇದು ಕಾರಣವಾಗಿದೆ. ಹಾಗಾಗಿ, ನಾನು ಪೊಲೀಸರ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಿಮ್ಮ ಕುಟುಂಬ ವರ್ಗದವರಿಗೆ ಕೂಡಾ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲೇಬೇಕು. ಹಬ್ಬ ಹರಿದಿನಗಳಲ್ಲಿಯೂ ಕೂಡ ನಿಮ್ಮ ಕರ್ತವ್ಯದ ನಡುವೆ ನೀವು ಗೈರು ಹಾಜಿರಾದರೂ ಅವರು ಎಲ್ಲವನ್ನೂ ಸೂಸುತ್ರವಾಗಿ ಮನೆಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಗುರುಮಠಕಲ್ ನಲ್ಲಿ ಪಿ.ಎಸ್.ಐ ಒಬ್ಬರು ತಮ್ಮ ಮಗನ ಹುಟ್ಟುಹಬ್ಬದ ಕಾರ್ಯಕ್ರಮ ಬಿಟ್ಟು ಸೇವೆ ಮಾಡಿದ್ದರು ಎಂದು ನೆನೆಪಿಸಿಕೊಂಡ ಸಚಿವರು ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸರಕಾರ ಹಾಗೂ ತಾವು ಪೊಲೀಸ್ ಇಲಾಖೆಯ ಹಿತರಕ್ಷಣೆಗೆ ಬದ್ಧವಾಗಿದ್ದು ಎಸ್ಪಿಯವರ ಬೇಡಿಕೆಯಂತೆ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು. ಇದಕ್ಕೆ ಈ ವರ್ಷ 20-25 ಕೋಟಿ ರೂ. ಅನುದಾನ ತೆಗೆದಿರಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಪೋಲಿಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿಗೆ ಆಸ್ಪತ್ರೆಯಲ್ಲಿ ಮಗುವಿನ ಅಪಹರಣವಾದ ಕೆಲವೇ ಗಂಟೆಗಳಲ್ಲಿ ನಗರ ಪೊಲೀಸರು ಪತ್ತೆ ಹಚ್ಚಿ ಮಗುವನ್ನು ಮತ್ತೆ ತಾಯಿ ಮಡಿಲಿಗೆ ಸೇರುವಂತೆ ಮಾಡಿ ರಾಜ್ಯವ್ಯಾಪಿ ಪ್ರಶಂಸೆಗೆ ಕಾರಣವಾಗಿದ್ದಾರೆ. ಪೊಲೀಸರು ಕರ್ತವ್ಯದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಸಂತೋಷದ ವಿಚಾರವಾಗಿದೆ. ಇದು ಅವರನ್ನು ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದರು.
ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಪೊಲೀಸ್ ತಂಡಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಪುರುಷ ಹಾಗೂ ಮಹಿಳಾ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರು, ಸಾಬಣ್ಣ ತಳವಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಜರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ವಿವಿಧ ಹಂತದ ಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಭಾಗವಹಿಸಿದ್ದರು.
ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿದರು. ಹೆಚ್ಚುವರಿ ಎಸ್ಪಿ ಎನ್. ಶ್ರೀನಿಧಿ ವಂದಿಸಿದರು.