ಕಲಬುರಗಿ | 'ರಸ್ತೆ ಸುರಕ್ಷತಾ ಅಭಿಯಾನ'ಕ್ಕೆ ಪೊಲೀಸ್ ಕಮೀಷನರ್ ಚಾಲನೆ
ಕಲಬುರಗಿ : ವಾಹನ ಸವಾರರು ಹಾಗೂ ಪಾದಚಾರಿಗಳು ತಪ್ಪದೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ರಕ್ಷಣೆಗೆ ಮುಂದಾಗಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಅವರು ಕರೆ ನೀಡಿದರು.
ನಗರದ ಸಾರ್ವಜನಿಕ ಉದ್ಯಾನವನದ ಪಕ್ಕದಲ್ಲಿರುವ ಆರ್.ಟಿ.ಓ.ಕಚೇರಿ ಆವರಣದಲ್ಲಿ ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ 5 ಎಲ್ಇಡಿ ವಾಹನಗಳ ಮೂಲಕ ರಸ್ತೆ ಸುರಕ್ಷಿತ ಕುರಿತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವ 'ರಸ್ತೆ ಸುರಕ್ಷತಾ ಅಭಿಯಾನʼಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೈಕ್ ಸವಾರರು ತಪ್ಪದೆ ಹೆಲ್ಮಟ್ ಧರಿಸಬೇಕು, ಕಾರ್ ಚಾಲಕರು ಸೀಟ್ ಬೆಲ್ಟ್ ಅನ್ನು ಹಾಕಿಕೊಳ್ಳಬೇಕು ಎಂದು ಹೇಳಿದ ಅವರು, ತಪ್ಪದೇ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸುತ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ, ನಗರದಲ್ಲಿ ಸುಗಮ ಸಂಚಾರಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಪಿ (ಕ್ರೈಂ ಮತ್ತು ಸಂಚಾರಿ) ರವರಾದ ಪ್ರವೀಣ ಎಚ್.ನಾಯಕ್, ಉಪ ಸಾರಿಗೆ ಆಯುಕ್ತರಾದ ಆನಂದ ಪಾರ್ಥನಳ್ಳಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೆಶಕರಾದ ಸೂರ್ಯಕಾಂತ ಮದಾನಿ, ರಸ್ತೆ ಸುರಕ್ಷತಾ ಅಭಿಯಾನದ ಸಂವಹನ ಕಾರರಾದ ಕು.ಶೀಲಾ ಟಿ.ಎಸ್., ಅಧಿಕಾರಿಗಳಾದ ಭೀಮರಾಯ, ರತನಕುಮಾರ, ಸಾರಿಗೆ ಇಲಾಖೆಯ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.